ಕಾರವಾರ: ಸದಾ ಭಕ್ತರು ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋಕರ್ಣ ಕ್ಷೇತ್ರಕ್ಕೆ ಕೊರೊನಾ ಕರಿಛಾಯೆ ಬಿದ್ದಿದೆ. ಲಾಕ್ಡೌನ್ ಸಡಿಲಗೊಂಡರೂ ಜನರು ದೇವಾಲಯಕ್ಕೆ ಬರುತ್ತಿಲ್ಲ. ಕ್ಷೇತ್ರದ ಬೀದಿಗಳು ಬಿಕೋ ಎನ್ನುತ್ತಿವೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಪರಶಿವನ ಆತ್ಮಲಿಂಗವಿರುವ ಐತಿಹಾಸಿಕ ಕ್ಷೇತ್ರ ಗೋಕರ್ಣಕ್ಕೆ ಕೊರೊನಾ ದೊಡ್ಡಮಟ್ಟದ ಆಘಾತ ನೀಡಿದೆ. ಮಹಾಬಲೇಶ್ವರ ದೇವಾಲಯದಲ್ಲಿ ನಿತ್ಯ ಪೂಜಾ ವಿಧಿವಿಧಾನ ಹೊರತುಪಡಿಸಿ, ಕಳೆದ ಎರಡು ತಿಂಗಳಿಂದ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಅಲ್ಲದೆ ಭಕ್ತರಿಗೂ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ಸದಾ ಪ್ರವಾಸಿಗರು ಹಾಗೂ ಭಕ್ತರಿದಂಲೇ ತುಂಬಿರುತ್ತಿದ್ದ ಗೋಕರ್ಣ ಕ್ಷೇತ್ರ ಇದೀಗ ಖಾಲಿಯಾಗಿದೆ. ಮಾತ್ರವಲ್ಲದೆ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಬೀಚ್ಗಳು ಮೌನವಾಗಿವೆ.
ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಜನರನ್ನೇ ನಂಬಿ ಅಂಗಡಿಗಳನ್ನು ತೆರೆದಿದ್ದ ಮಾಲೀಕರಿಗೂ ಕೊರೊನಾ ಪೆಟ್ಟು ನೀಡಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಜನರಿಲ್ಲದ ಕಾರಣ ತೆರೆದುಕೊಂಡಿಲ್ಲ. ಇದ್ದ ಅಂಗಡಿಗಳಿಗೂ ವ್ಯಾಪಾರ ಇಲ್ಲ. ಗೋಕರ್ಣದ ಬೀದಿಗಳನ್ನು ನೋಡಿದರೇ ನೂರಾರು ವರ್ಷಗಳ ಹಿಂದಿನ ಚಿತ್ರಗಳನ್ನು ನೋಡಿದಂತೆ ಭಾಸವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಲಾಕ್ಡೌನ್ನಿಂದಾಗಿ ದೇವಾಲಯ ಸಂಪೂರ್ಣ ಬಂದಾಗಿದೆ. ಪ್ರತಿನಿತ್ಯ 30 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಿದ್ದ ಈ ಕ್ಷೇತ್ರ ಇದೀಗ ಸ್ತಬ್ಧವಾಗಿದೆ. ದೇವಾಲಯದಲ್ಲಿ ನಿತ್ಯ ಪೂಜಾ ವಿಧಿವಿಧಾನ ಹಾಗೂ ಲೋಕ ಕಲ್ಯಾಣದ ವಿಶೇಷ ಪೂಜೆ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದ ಸನ್ನಿಧಿಯಲ್ಲಿ ಪೂಜೆ ನಡೆಸುವ ಕೆಲ ಪುರೋಹಿತರು ಕೆಲಸ ಕಾರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇವಾಲಯಕ್ಕೆ ಬರುವ ಆದಾಯ ಕೂಡ ಸಂಪೂರ್ಣ ನಿಂತಿದೆ. ಮುಂದಿನ ದಿನಗಳಲ್ಲಿ ಮಹಾಬಲೇಶ್ವರನೇ ದಾರಿ ತೋರುವ ನಂಬಿಕೆ ಇದೆ ಎನ್ನುತ್ತಾರೆ ಇಲ್ಲಿನ ಆಡಳಿತಾಧಿಕಾರಿ.
ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಮಹಾಬಲೇಶ್ವರ ದೇವಾಲಯ ಜೂನ್ 1ರಂದು ಓಪನ್ ಆಗುವ ಸಾಧ್ಯತೆಯಿದೆ.