ಕಾರವಾರ: ಮುಂಬೈನಲ್ಲಿ ನೆಲೆಸಿರುವ ಕಾರವಾರ ಮೂಲದ ಬಹುಭಾಷಾ ಕಲಾವಿದೆ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದಾಗಿ ಕನ್ನಡ ಸಿನೆಮಾವೊಂದನ್ನು ನಿರ್ಮಾಣ ಮಾಡಿ ನಟಿಸಿದ್ದು, ಮಾರ್ಚ್ 26 ರಂದು ರಾಜ್ಯದಾದ್ಯಂತ 50 ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.
ತಾಲ್ಲೂಕಿನ ಮಾಜಾಳಿ ಮೂಲದ ಮನಿಷಾ ವೈಂಗಣಕರ್ ಎಂಬುವರು "ನನ್ನ ಗುರಿ-ವಾರಂಟ್" ಎಂಬ ಕನ್ನಡ ಚಿತ್ರವೊಂದನ್ನು ತಾವೇ ರಚಿಸಿ, ನಟಿಸಿ, ನಿರ್ಮಾಣ ಮಾಡಿದ್ದಾರೆ. ಜೆಕೆ ಖ್ಯಾತಿಯ ಕನ್ನಡದ ಪ್ರತಿಭಾವಂತ ನಟ ಜಯಂತ ಕಾರ್ತಿಕ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಎಸ್.ಕೆ. ನಾಗೇಂದ್ರ ಅರಸ್ ಅವರು ಸಂಕಲನ ಹಾಗೂ ನಿರ್ದೇಶನ ಮಾಡಿದ್ದು ಇದೇ 26ರಂದು ಚಿತ್ರ ಸುಮಾರು 50 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದ ಬಹುಭಾಗ ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತ ಹಾಗೂ ಬ್ಯಾಂಕಾಕ್‌ನಲ್ಲಿ ಮಾಡಲಾಗಿದೆ. ಹಿಂದಿನಿಂದಲೂ ಸಿನೆಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಇತ್ತು. ಖುದ್ದು ಚಿತ್ರವನ್ನ ನಿರ್ಮಾಣ ಮಾಡುವ ಮೂಲಕ ಆಸೆಯನ್ನು ಈಡೇರಿಸಿಕೊಂಡಿದ್ದು ಎಲ್ಲರೂ ಚಿತ್ರವನ್ನ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಿ ಎಂದು ಮನಿಷಾ ಮನವಿ ಮಾಡಿದ್ದಾರೆ.
ಮನಿಷಾ ನಗರದ ಸೇಂಟ್ ಮೈಕಲ್ ಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಹಾಗೂ ದಿವೇಕರ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ. ಬಳಿಕ ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿ ಅಲ್ಲಿ ಕೆಲವು ವರ್ಷಗಳ ಕಾಲ ಇದ್ದು ಬಂದು, ಇದೀಗ ಮುಂಬೈನಲ್ಲಿ ನೆಲೆಸಿದ್ದಾರೆ. ಈ ವೇಳೆ ಅವರು ಓರ್ವ ಕಲಾವಿದೆಯಾಗಿ, ಕಥೆಗಾರಳಾಗಿ ಗುರುತಿಸಿಕೊಂಡಿದ್ದರು. ಬಳಿಕ ರಾಜಸ್ತಾನಿ ಭಾಷೆಯಲ್ಲಿ ಸಂಗಮ ಎಂಬ ಚಲನಚಿತ್ರವನ್ನು ನಿರ್ಮಿಸಿ ಆ ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದರು.
ಇದೀಗ ತಾನು ಹುಟ್ಟಿ ಬೆಳೆದ ಕನ್ನಡ ನಾಡಿನ ಭಾಷೆಯಲ್ಲಿಯೇ ಚಲನಚಿತ್ರವೊಂದನ್ನು ಹೊರತರಬೇಕು ಎಂಬ ಬಯಕೆಯಿಂದ ಕಾರ್ಯ ಪ್ರವೃತ್ತರಾಗಿ ತಾವೇ ಸ್ವತಃ ಕತೆ ಬರೆದು, ಅದಕ್ಕೆ ಚಿತ್ರಕಥೆಯನ್ನು ಕೂಡಾ ಅವರೇ ಬರೆದಿದ್ದಾರೆ. ಅಲ್ಲದೇ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅವರು ಸುಮಾರು 3.15 ಕೋಟಿ ರೂ. ವೆಚ್ಚದ ಬಜೆಟ್‍ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.