ಭಟ್ಕಳ: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಾಡುವಳ್ಳಿಯ ಹಲ್ಯಾಣಿ ಗ್ರಾಮದ ಟ್ಯಾಕ್ಸಿ ಚಾಲಕ ನಾಗರಾಜ ದುರ್ಗಯ್ಯಗೊಂಡ ಅವರು (ರಾಜ್ಯ ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ) ಆಯ್ಕೆಯಾಗಿದ್ದಾರೆ.
ಗಣರಾಜ್ಯೋತ್ಸವ ಸಮಾರಂಭ ವೀಕ್ಷಣೆಗೆ ಅವಕಾಶ ಒದಗಿಸಿಕೊಡುವ ಸಲುವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಅರ್ಜಿ ಆಹ್ವಾನಿಸಿತ್ತು. ರಾಜ್ಯದಿಂದ ಒಟ್ಟು 3,20,013 ಅರ್ಜಿ ಸಲ್ಲಿಕೆಯಾಗಿದ್ದವು. ಅದರಲ್ಲಿ ಪರಿಶಿಷ್ಠ ಪಂಗಡ ಹಾಗೂ ಬುಡಕಟ್ಟು ಸಾಂಸ್ಕೃತಿಕ ಕಲೆಯ ಹಿನ್ನೆಲೆ ಹೊಂದಿರುವ ನಾಗರಾಜಗೊಂಡ ಅವರು ಆಯ್ಕೆಯಾಗಿದ್ದಾರೆ. ಹಾಗೂ ಹಾಸನ ಮೂಲದ ಓರ್ವ ಮಹಿಳೆ ಕೂಡ ದೆಹಲಿಗೆ ಹೋಗಲಿದ್ದಾರೆ.
ಇದನ್ನೂ ಓದಿ...25 ಸಾವಿರ ಮಂದಿಗಷ್ಟೇ ಪರೇಡ್ ನೋಡುವ ಅವಕಾಶ; ನವದೆಹಲಿಯಲ್ಲಿ ಪೊಲೀಸ್ ಸರ್ಪಗಾವಲು
ಮೂಲತಃ ಹಾಡುವಳ್ಳಿಯ ಹರ್ಗಿಮಕ್ಕಿ ಮನೆ, ಹಿರೇಬೇಳು, ಹಲ್ಯಾಣಿಯ ನಿವಾಸಿ ನಾಗರಾಜಗೊಂಡ, ಭಟ್ಕಳದಲ್ಲಿ ಟ್ಯಾಕ್ಸಿ ಚಾಲಕರಾಗಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ 13 ದಿನಗಳ ಕಾಲ ಪ್ರಯಾಣದ ಅವಕಾಶ ಲಭಿಸಿದೆ. ಜನವರಿ 21ರಂದೇ ದೆಹಲಿ ಸೇರಿಕೊಂಡಿರುವ ಅವರು, ಫೆಬ್ರುವರಿ 3ರಂದು ತವರಿಗೆ ಮರಳಲಿದ್ದಾರೆ. ಅವರು ರಾಷ್ಟ್ರಪತಿ ಭವನ, ಸಂಸತ್ ಭವನ, ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳ ಪ್ರವಾಸ ಕೈಗೊಳ್ಳಬಹುದು.