ಕಾರವಾರ: ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪ್ರಾಚೀನ ವಸ್ತುಗಳು ಕಣ್ಮರೆಯಾಗುತ್ತಿವೆ. ಮನೆಗಳಲ್ಲಿ ಪೂರ್ವಜರು ಬಳಸುತ್ತಿದ್ದ ವಸ್ತುಗಳು ಮೂಲೆಗುಂಪಾಗಿ ಅತ್ಯಾಧುನಿಕ ಸಲಕರಣೆಗಳು ಅಡುಗೆ ಕೋಣೆ ಸೇರಿಕೊಂಡಿವೆ. ಆದರೆ, ಈ ಹಿಂದೆ ಬಳಸುತ್ತಿದ್ದ ಅಪರೂಪದ ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ಇತರೆ ಪರಿಕರಗಳನ್ನು ಸಂಗ್ರಹಿಸಿದ ಮುಸ್ಲಿಂ ಕುಟುಂಬವೊಂದು ಭಟ್ಕಳದಲ್ಲಿ ಅವುಗಳ ಪ್ರದರ್ಶನ ನಡೆಸಿ ಗಮನ ಸೆಳೆದಿದೆ.
ಆಧುನಿಕತೆ ಬೆಳೆದಂತೆ ನಮ್ಮ ಜೀವನ ಶೈಲಿಯೂ ಬದಲಾಗುತ್ತಿದೆ. ಮಾನವ ತನ್ನ ಜೀವನ ಕ್ರಮಕ್ಕೆ ಅನೂಕೂಲವಾಗುವಂತಹ ವ್ಯವಸ್ಥೆಗೆ ಮಾರು ಹೋಗುತ್ತಿದ್ದಾನೆ. ಅದರಂತೆ ನಮ್ಮ ಪೂರ್ವಜರು ಮನೆ, ಜಮೀನು ಕೆಲಸಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಿದ್ದ ಪುರಾತನ ಹಾಗೂ ಪ್ರಾಚೀನ ವಸ್ತುಗಳೀಗ ಸಂಪೂರ್ಣ ಕಾಣೆಯಾಗಿವೆ. ಈ ವಸ್ತುಗಳ ಬದಲಾಗಿ ಪ್ಲಾಸ್ಟಿಕ್, ಫೈಬರ್, ಗಾಜಿನ ವಸ್ತುಗಳು ಮನೆಗಳಲ್ಲಿ ರಾರಾಜಿಸುತ್ತಿವೆ. ಅತಿ ಕಡಿಮೆ ಬೆಲೆಗೆ ಈ ವಸ್ತುಗಳು ಸಿಗುವುದು ಮಾತ್ರವಲ್ಲದೇ, ಹೆಚ್ಚು ಆಕರ್ಷಿತವಾಗುವ ಕಾರಣ ಜನರು ಕೂಡ ಕೊಂಡುಕೊಳ್ಳುತ್ತಿದ್ದಾರೆ. ಆದರೆ, ಈ ಹಿಂದೆ ಬಳಸುತ್ತಿದ್ದ ಪುರಾತನ ವಸ್ತುಗಳು ಈಗಂತೂ ನೋಡುವುದಕ್ಕೂ ಕೂಡ ಸಿಗುವುದು ಕಷ್ಟ ಎಂಬಂತಾಗಿದೆ.
ಭಟ್ಕಳ ಪಟ್ಟಣದ ಚಿನ್ನದಪಳ್ಳಿ ಬಳಿ ವಾಸವಿರುವ ನವಾಯತ್ ಮೆಹೆಫಿಲ್ ಎಂಬ ಕುಟುಂಬದವರು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ತಮ್ಮ ಮನೆಯನ್ನೇ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಹಳೆಯ ಕಾಲದ ಹಿತ್ತಾಳೆ, ಕಂಚಿನ ಪಾತ್ರೆ, ಪಿಂಗಾಣಿ ಭರಣಿ, ಕಂಚಿನ ದೀಪ, ಮಹಿಳೆಯರ ಅಲಂಕಾರಿಕಾ ವಸ್ತುಗಳ ಸಂಗ್ರಹದ ಮರದ ಪೆಟ್ಟಿಗೆ, ರೇಡಿಯೋ, ಸುಗಂಧ ದ್ರವ್ಯ ಸಿಂಪಡನೆಯ ವಸ್ತುಗಳು ಸೇರಿದಂತೆ ಪ್ರತಿಯೊಂದನ್ನೂ ಸಂಗ್ರಹಿಸಲಾಗಿದೆ. ಇದೀಗ ಭಟ್ಕಳದ ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯು ಒಂದು ಸಾವಿರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈ ವಸ್ತುಗಳನ್ನು ಪ್ರದರ್ಶನ ಮಾಡುವ ಮೂಲಕ ಹಳೆಯ ವಸ್ತುಗಳ ಬಗ್ಗೆ ಜನರಿಗೆ ಮಾಹಿತಿ ಕೊಡಲಾಗುತ್ತಿದೆ ಎನ್ನುತ್ತಾರೆ ಪ್ರದರ್ಶನ ಆಯೋಜಕ ಶಬೀರ್ ಅಜೀಬ್.
ಇದನ್ನೂ ಓದಿ: ಮಹಿಳಾ ಸಬಲೀಕರಣಕ್ಕಾಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ
ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯ ಸಹಸ್ರ ಶತಮಾನೋತ್ಸವಕ್ಕೆ ಆಗಮಿಸಿದ ಬಹುತೇಕರು ಈ ಪ್ರಾಚೀನ ವಸ್ತುಗಳ ಸಂಗ್ರಹಾಲಯ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಶಾಲಾ ಕಾಲೇಜು ಶಿಕ್ಷಕರು ಭಾಗವಹಿಸಿ ಅಪರೂಪದ ವಸ್ತುಗಳನ್ನು ಕಂಡು ಆಯೋಜಕರಿಂದ ಮಾಹಿತಿ ಪಡೆದರು. ಅಲ್ಲದೇ, ಎಂದೂ ನೋಡಿರದ ಅಪರೂಪದ ವಸ್ತುಗಳನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.
ಭಟ್ಕಳಕ್ಕೆ ಬರುವ ಮೊದಲು ಇಲ್ಲಿ ನೆಲೆಸಿರುವ ನವಾಯಿತಿ ಮುಸ್ಲಿಂ ಸಮುದಾಯದವರು ಶ್ರೀಲಂಕಾ, ಯೆಮೆನ್, ಮಲೇಷಿಯಾ ಭಾಗದಲ್ಲಿ ಮೊದಲು ವಾಸವಿದ್ದರು. ಸಾವಿರ ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಮೊದಲು ನವಾಯಿತಿಗಳು ಕಾಲಿಟ್ಟಿದ್ದು ಈ ಹಿಂದೆ ಹೊನೂರು ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಹೊನ್ನಾವರದ ಮಂಕಿಯಲ್ಲಿ. ಅಲ್ಲಿಂದ ಬಳಿಕ ಭಟ್ಕಳಕ್ಕೆ ಬಂದರು. ಇಲ್ಲಿ ಎರಡು ಮೂರು ತಿಂಗಳು ಉಳಿದುಕೊಂಡು ಬಳಿಕ ಕೆಲವರು ಕೇರಳದತ್ತ ಪ್ರಯಾಣಿಸಿದರು. ಇಂತಹ ಇತಿಹಾಸ ಹೊಂದಿರುವ ಮುಸ್ಲಿಂ ಸಮುದಾಯದವರು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಯುವ ಜನತೆಗೆ ಪರಿಚಯಿಸಲು ವಸ್ತು ಪ್ರದರ್ಶನ ಆಯೋಜಿಸಿರುವುದು ಖುಷಿಯ ವಿಚಾರ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇದನ್ನೂ ಓದಿ: ಗಮನ ಸೆಳೆದ ಬಾಲವಿಜ್ಞಾನಿಗಳ ಹೊಸ ಅನ್ವೇಷಣೆಗಳು..!