ಕಾರವಾರ : ಎಂಜಿನಿಯರ್‌ರೊಬ್ಬರು ಮೋಕ್ಷ ಎಂಬ ಚೊಚ್ಚಲ ಸಿನಿಮಾವನ್ನು ತಾವೇ ನಿರ್ದೇಶಿಸಿ, ನಿರ್ಮಾಣ ಮಾಡಿದ್ದು, ಮಾರ್ಚ್ 4ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.
ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ವೃತ್ತಿ ನಿಭಾಯಿಸುತ್ತಿದ್ದ ಅಂಕೋಲಾ ಮೂಲದ ಸಮರ್ಥ ನಾಯ್ಕ, ನೂರಾರು ಆ್ಯಡ್ ಫಿಲಂಗಳನ್ನು ಮಾಡಿರುವ ಅನುಭವಿ.
ಇದೀಗ ಮೋಕ್ಷ ಸಿನಿಮಾಕ್ಕಾಗಿ ತಮ್ಮ ಕೆಲಸ ಕಾರ್ಯವನ್ನೂ ಬದಿಗೊತ್ತಿರುವ ಅವರು, ಕಳೆದ ಮೂರ್ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದಾರೆ. ತಮ್ಮ ಎಸ್ಜಿಎನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರದ ಬಿಡುಗಡೆಗೆ ಇದೀಗ ಸಮರ್ಥ ಸಜ್ಜಾಗಿದ್ದಾರೆ.
ಸಮರ್ಥ ನಾಯ್ಕ ಅವರ ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಮೋಕ್ಷದಲ್ಲಿ ತಾರಕ್ ಪೊನ್ನಪ್ಪ ಹಾಗೂ ಪ್ರಶಾಂತ್ ಅವರ ಸಹ ನಟನೆಯೊಂದಿಗೆ ಮೋಹನ್ ಧನರಾಜ್ ಹಾಗೂ ಆರಾಧ್ಯಾ ಲಕ್ಷ್ಮಣ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಮಾಸ್ಕ್‌ಮ್ಯಾನ್ ಈ ಸಿನಿಮಾದ ಮುಖ್ಯ ಆಕರ್ಷಣೆಯಾಗಿದ್ದು ಉತ್ತರಕನ್ನಡ, ಬೆಂಗಳೂರು, ಹಾಸನ ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಿ ಇದೀಗ ಹಿರಿ ತೆರೆಗೆ ಲಗ್ಗೆ ಇಡಲು ಸಜ್ಜಾಗಿದೆ.
ಇನ್ನು ಜಯಂತ್ ಕಾಯ್ಕಿಣಿ, ಕುಮಾರದತ್ತ್ ಸಾಹಿತ್ಯ, ಕಿಶನ್ ಮೋಹನ್, ಸಚಿನ್ ಬಾಲು ಸಂಗೀತದಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಸಿನಿಮಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲೂ ಸಿನಿ ರಸಿಕರಿಗೆ ರೊಮ್ಯಾಂಟಿಕ್ ಅನುಭವ ನೀಡುವುದಂತೂ ಪಕ್ಕಾ.
ಈಗಾಗಲೇ ಸಿನಿಮಾದ ಟ್ರೈಲರ್‌ಗಳು ಸಾಕಷ್ಟು ವೈರಲ್ ಆಗಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮಾರ್ಚ್ 4ರಂದು ಥಿಯೇಟರ್‌ನಲ್ಲಿ ಜನರ ರೆಸ್ಪಾನ್ಸ್ ಹೇಗಿರಲಿದೆ ಎಂಬುದನ್ನ ಚಿತ್ರ ತಂಡ ಎದುರು ನೋಡುತ್ತಿದೆ.