ಕಾರವಾರ: ನೆರೆ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿರುತ್ತದೆ. ಪ್ರವಾಹ ಸಂದರ್ಭ ಎದುರಾದಾಗ ಎನ್‌ಡಿಆರ್‌ಎಫ್ ಹೇಗೆ ಕಾರ್ಯಾಚರಣೆ ಕೈಗೊಳ್ಳತ್ತದೆ, ಯಾವ ರೀತಿಯಲ್ಲಿ ಜನರನ್ನು ರಕ್ಷಣೆ ಮಾಡಲಾಗುತ್ತದೆ ಅನ್ನೋದನ್ನು ಎನ್‌ಡಿಆರ್‌ಎಫ್ ತಂಡ ಕದ್ರಾ ಜಲಾಶಯದ ಬಳಿ ಕಾಳಿ ನದಿಯಲ್ಲಿ ಅಣಕು ಪ್ರದರ್ಶನ ಮೂಲಕ ಮಾಹಿತಿ ನೀಡಿದೆ.
ಅಣಕು ಪ್ರದರ್ಶನ :
ಜಿಲ್ಲೆಯಲ್ಲಿ 2019ರಲ್ಲಿ ಪ್ರವಾಹದಿಂದ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದಾದ ಬೆನ್ನಲ್ಲೇ ಈ ವರ್ಷವೂ ಪ್ರವಾಹ ಎದುರಾಗಿ ಸಾಕಷ್ಟು ಹಾನಿಯಾಗಿತ್ತು. ಪ್ರವಾಹ ಒಮ್ಮೆಲೇ ಎದುರಾದಾಗ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಎನ್‌ಡಿಆರ್‌ಎಫ್ ತಂಡ ಬಂದು ಅಣಕು ಪ್ರದರ್ಶನ ನಡೆಸಿತು.
ಕೈಗಾ ಸಮೀಪದ ಕಾಳಿ ನದಿಯಲ್ಲಿ ಬೋಟ್ ಮುಳುಗಡೆಯಾದಾಗ, ನಡುಗಡ್ಡೆಯಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡೋದು ಹೇಗೆ? ಮುಳುಗಿದವರನ್ನು ಮೇಲಕ್ಕೆ ಎತ್ತುವುದು ಹೇಗೆ? ಪ್ರಥಮ ಚಿಕಿತ್ಸೆ ಹೇಗೆ ಕೊಡಲಾಗುತ್ತದೆ? ಎನ್ನುವ ಕುರಿತು ಅಣಕು ಕಾರ್ಯಾಚರಣೆಯ ಪ್ರದರ್ಶನವನ್ನು ನೀಡಲಾಯಿತು.
ನೂರಕ್ಕೂ ಅಧಿಕ ಸಿಬ್ಬಂದಿಯಿಂದ ಅಣಕು ಪ್ರದರ್ಶನ:
ಅಣಕು ಕಾರ್ಯಾಚರಣೆಯಲ್ಲಿ(ಪ್ರದರ್ಶನ) ಸುಮಾರು ನೂರಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು. ಕೈಗಾ ಎನ್‌ಪಿಸಿಐಎಲ್, ಸ್ಥಳೀಯ ಪೊಲೀಸರು, ಕಂದಾಯ, ಅಗ್ನಿಶಾಮಕ ದಳ ಹಾಗೂ ಹೋಂಗಾರ್ಡ್ ಸಿಬ್ಬಂದಿ ಅಣಕು ಕಾರ್ಯಾಚರಣೆಗೆ ಸಾಥ್ ನೀಡಿದರು. ಸುಮಾರು ಒಂದು ಘಂಟೆಗಳ ಕಾಲ ಪ್ರವಾಹದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎನ್ನುವುದನ್ನು ಸಿಬ್ಬಂದಿ ತೋರಿಸಿಕೊಟ್ಟರು.
ಅಲ್ಲದೇ ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ, ಕೈಗಾದ ಸಿಬ್ಬಂದಿಗೆ ಸಹ ಕಾರ್ಯಾಚರಣೆ ಕೈಗೊಳ್ಳುವ ಕುರಿತು ತೋರಿಸಿಕೊಟ್ಟರು. ಅವಘಡಗಳು ಸಂಭವಿಸಿದ ವೇಳೆ ರಕ್ಷಣಾ ಕಾರ್ಯಾಚರಣೆ ಕುರಿತು ಜಾಗೃತಿ ಅಗತ್ಯ ಇರುವುದರಿಂದ ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ಅಣಕು ಕಾರ್ಯಾಚರಣೆ ಮೂಲಕ ಎಚ್ಚರಿಸಲಿದ್ದೇವೆ ಎಂದು ಎನ್‌ಡಿಆರ್‌ಎಫ್ ಕಮಾಂಡರ್ ತಿಳಿಸಿದರು.
ಇದನ್ನೂ ಓದಿ: ನಾಯಿ ತ್ಯಾಜ್ಯ ಚೀಲ ಕಡ್ಡಾಯ ಕೋರಿ ಅರ್ಜಿ ಸಲ್ಲಿಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಕಾರವಾರ ತಾಲೂಕಿನಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕದ್ರಾ ಜಲಾಶಯ ಕಟ್ಟಲಾಗಿದೆ. ಮಳೆಯಿಂದ ಕಾಳಿ ನದಿ ತುಂಬಿದಾಗ ಕದ್ರಾ ಜಲಾಶಯದಿಂದ ನೀರು ಹೊರಬಿಟ್ಟು ಪ್ರವಾಹ ಸೃಷ್ಟಿಯಾಗಿತ್ತು. ಪದೇ ಪದೆ ಕದ್ರಾ ಭಾಗದಲ್ಲಿ ಪ್ರವಾಹ ಆಗುವುದರಿಂದ ಅಣಕು ಕಾರ್ಯಾಚರಣೆ ಮೂಲಕ ಎಚ್ಚರಿಸುವ ಕಾರ್ಯ ಮಾಡಲಾಯಿತು.
ಒಟ್ಟಿನಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಜನರ ರಕ್ಷಣೆ ಮಾಡಲು, ಮುಂಜಾಗ್ರತೆ ವಹಿಸಲು ಅಣಕು ಕಾರ್ಯಾಚರಣೆ ಮೂಲಕ ಎನ್‌ಡಿಆರ್‌ಎಫ್ ಸಿಬ್ಬಂದಿ ಎಚ್ಚರಿಸಿದ್ದು ನಿಜಕ್ಕೂ ಒಳ್ಳೆಯ ಬೆಳವಣಿಗೆ..