ಭಟ್ಕಳ: ಹಳೆ ಮೀನು ಮಾರುಕಟ್ಟೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮೀನು ವ್ಯಾಪಾರಿಗಳು ಹಾಗೂ ಮೀನುಗಾರರ ಪರವಾಗಿ ನಿಲ್ಲುವ ಉದ್ದೇಶದಿಂದ ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ, ವ್ಯಾಪಾರಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಯಾವುದೇ ಕಾರಣಕ್ಕೂ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಪುರಸಭೆಯಿಂದ ರಿಪೇರಿ ಮಾಡಲು ಸಾಧ್ಯವಾಗದಿದ್ದರೆ, ಶಾಸಕರ ಅನುದಾನದಿಂದ ಹಣ ತಂದು ರಿಪೇರಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಸುನೀಲ್ ನಾಯ್ಕ ಅವರು, ಮೀನು ಮಾರುಕಟ್ಟೆ ಒಳಗಡೆ ತೆರಳಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ನಂತರ ಮಾರುಕಟ್ಟೆಯಲ್ಲಿನ ಮಹಿಳಾ ಮೀನು ವ್ಯಾಪಾರಿಗಳನ್ನುದ್ದೇಶಿ ಮಾತನಾಡಿದ ಅವರು, ಸದ್ಯ ಮತ್ಸಕ್ಷಾಮದಿಂದ ಮೀನುಗಾರಿಕೆ ಹಾಗೂ ಮೀನು ವ್ಯಾಪಾರಕ್ಕೆ ಸಮಸ್ಯೆ ಆಗಿದೆ. ದುಡಿಮೆಗೆ ಅನಾನುಕೂಲವಾಗುತ್ತಿದೆ. ಮೀನು ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪುರಸಭೆ ಏಕಾಏಕಿ ಹಳೆ ಮೀನು ಮಾರುಕಟ್ಟೆಯಲ್ಲಿನ ವ್ಯಾಪಾರಿಗಳನ್ನು ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸುತ್ತಿರುವುದು ಸಮಂಜಸವಲ್ಲ. ಈ ಹಿಂದೆ ಪುರಸಭೆ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ನನ್ನ ಬಳಿ ಬಂದ ವೇಳೆ ಅವರಿಗೆ ವಿಚಾರ ಮನವರಿಕೆ ಮಾಡಿದ್ದೇನೆ. ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಬೇಡ. ಎರಡು ಮೀನು ಮಾರುಕಟ್ಟೆಯನ್ನು ತೆರೆದು ವ್ಯಾಪಾರಕ್ಕೆ ಅನೂಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ ಎಂದರು.
ನಾನು ಶಾಸಕನಾಗಿರುವ ಅವಧಿಯಲ್ಲಿ ಹಳೆ ಮೀನು ಮಾರುಕಟ್ಟೆ ಬಂದ್ ಮಾಡಿಸಲು ಬಿಡುವುದಿಲ್ಲ. ಹಳೆ ಮೀನು ಮಾರುಕಟ್ಟೆ ರಿಪೇರಿಯನ್ನು ಪುರಸಭೆ ಈ ತಕ್ಷಣ ಮಾಡಿಕೊಡಬೇಕು. ಇಲ್ಲವಾದರೆ ಶಾಸಕರ ಅನುದಾನದಲ್ಲಿ ಸಂಪೂರ್ಣ ಹಳೆ ಮಾರುಕಟ್ಟೆಯನ್ನು ರಿಪೇರಿ ಮಾಡಿ ಕೊಡಲಿದ್ದೇನೆ. ಸ್ಥಳಾಂತರ ಹಾಗೂ ಒಕ್ಕಲೆಬ್ಬಿಸುವುದನ್ನು ಪುರಸಭೆ ಈ ತಕ್ಷಣಕ್ಕೆ ಕೈಬಿಡಬೇಕು. ಮಹಿಳಾ ಮೀನು ವ್ಯಾಪಾರಿಗಳ ಪರವಾಗಿ ಅವರು ಸ್ಥಳಕ್ಕೆ ಬಂದು ನಿಲ್ಲಬೇಕಾಗುವ ಎಚ್ಚರಿಕೆಯನ್ನು ನೀಡಿದರು.
ಓದಿ:ಕರಾವಳಿಯಲ್ಲಿ ಮತ್ತೆ ಮತ್ತೆ ಮರುಕಳಿಸುವ ನೈತಿಕ ಪೊಲೀಸ್ಗಿರಿ.. ಬಸ್ನಲ್ಲಿದ್ದ ಜೋಡಿ ಮೇಲೆ ಹಲ್ಲೆಗೈದ ಪುಂಡರು..
ಭಟ್ಕಳದ ಹಳೆಯ ಮೀನುಮಾರುಕಟ್ಟೆಯನ್ನು ನಂಬಿ ಸಾವಿರಾರು ಮೀನುಗಾರರ ಕುಟುಂಬದೊಂದಿಗೆ ಸುತ್ತಮುತ್ತಲಿನ ಇತರ ವ್ಯಾಪಾರ ವಹಿವಾಟುದಾರರೂ ಕೂಡ ಜೀವನ ಸಾಗಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾದ ಮೀನು ಮಾರುಕಟ್ಟೆಗೆ ಸ್ಥಳಾಂತರಿಸುವುದರಿಂದ ಮೀನುಗಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗುತ್ತದೆ ಎಂದರು.