ಶಿರಸಿ(ಉತ್ತರ ಕನ್ನಡ): ಚುನಾವಣೆ ಘೋಷಣೆಯಾಗುತ್ತಿದ್ದಂತೆ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದೆ. ಇಂದು (ಶುಕ್ರವಾರ) ಬೆಳಗ್ಗೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಶಿರಸಿಯ ವಿಧಾನ ಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಕ ರಾಜೀನಾಮೆ ಪತ್ರ ಸಲ್ಲಿಸಿದರು. ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜೀನಾಮೆ ನೀಡಿದ್ದು, ಚುನಾವಣೆಗೆ ಖಂಡಿತ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು. ಇವರು ಜೆಡಿಎಸ್ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
ಸಿ.ಟಿ. ರವಿ ಬಿಜೆಪಿಗೆ ಮಾರಕ: ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಮೂರು ಬಾರಿ ಶಾಸಕನಾಗಿರುವ ನನ್ನನ್ನು ಹುಚ್ಚು ನಾಯಿ ಓಡಿಸಿದ ರೀತಿ ಪಕ್ಷದಿಂದ ಓಡಿಸಿದರು. ಇದಕ್ಕೆಲ್ಲ ಸಿ.ಟಿ ರವಿ ಹಾಗೂ ಪ್ರಾಣೇಶ್ ಕಾರಣ. ಹೀನಾಯವಾಗಿ ನನ್ನನ್ನ ನಡೆಸಿಕೊಂಡರು. ಅವರೇ ಜನ ಕಳ್ಸಿ, ಅವ್ರೇ ಜಗಳ ಮಾಡ್ಸಿ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿ ಮಾಡಿದರು" ಎಂದು ಆರೋಪಿಸಿದರು. ಸಿ.ಟಿ. ರವಿ ಬಿಜೆಪಿಗೆ ಮಾರಕ. ಅವರು ಪಕ್ಷ ಉಳಿಸಲ್ಲ. ನನ್ನ ಬಗ್ಗೆ ಹೇಳಿಲ್ಲ ಅಂತಾ ಹೇಳಿ ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಕಾರಣ ಮುಂದಿನ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ನನಗೆ ಇನ್ನೂ ವಯಸ್ಸಾಗಿಲ್ಲ. ಅನಾರೋಗ್ಯವೂ ಇಲ್ಲ. ಆದರೂ ಟಿಕೆಟ್ ಕೈ ತಪ್ಪಿದೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಇಂತ್ತು ಸಂಜೆ ವೇಳೆಗೆ ತೀರ್ಮಾನ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಬಿಜೆಪಿಗೆ ಗುಡ್ ಬೈ ಹೇಳಿದ ಮತ್ತೋರ್ವ ಬೆಳಗಾವಿಯ ಮಾಜಿ ಸಚಿವ
ಇದೇ ವೇಳೆ ಯಡಿಯೂರಪ್ಪ ಅವರ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆಯೂ ಹೇಳಿದ್ದೇನೆ. ಯಡಿಯೂರಪ್ಪನವರು ಒಂದು ವಾರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಲ್ಲಿ ಬಿಜೆಪಿ 50 - 70 ಸೀಟನ್ನೂ ದಾಟುವುದಿಲ್ಲ. ಇಲ್ಲಿ ಅವರನ್ನು ಬಿಟ್ಟರೆ ಬೇರೆ ನಾಯಕರಿಲ್ಲ. ಮೋದಿ, ಅಮಿತ್ ಶಾ ಬಂದು ಹೋಗುತ್ತಾರೆ. ಅವರೇ ಎಲ್ಲವನ್ನೂ ಬಗೆಹರಿಸಬೇಕಿದೆ. ನನ್ನ ಒಳ್ಳೆಯತನಕ್ಕೂ ಖಂಡಿತ ಜಯವಿದೆ. ಈ ಬಾರಿಯೂ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡ್ತೇನಿ: ಸವದಿ ಘೋಷಣೆ
ಗೂಳಿಹಟ್ಟಿ ಶೇಖರ್ ರಾಜೀನಾಮೆ: ಬಿಜೆಪಿಯಿಂದ ಟಿಕೆಟ್ ನೀಡದ ಹಿನ್ನೆಲೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಶಾಸಕ ಸ್ಥಾನಕ್ಕೆ ಗುರುವಾರ ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ. ಆಪ್ತರ ಜತೆಗೆ ಶಿರಸಿಗೆ ಆಗಮಿಸಿದ ಅವರು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಲ್ಲಿ ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಪಕ್ಷ ವರಿಷ್ಠರ ನಿಲುವು. ವಿಜಯೇಂದ್ರ ಆಪ್ತರಿಗೆ ಸೀಟು ನೀಡಿದ್ದಾರೆ. ಹೊಸದುರ್ಗ ಸಾಮಾನ್ಯ ಕ್ಷೇತ್ರ. ನಾನು ಪರಿಶಿಷ್ಟ ಜಾತಿಗೆ ಸೇರಿದವನು. ಸಾಮಾಜಿಕ ನ್ಯಾಯದಡಿಯಲ್ಲಿ ನನಗೆ ಟಿಕೆಟ್ ತಪ್ಪಿರಬಹುದು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ರಾಜೀನಾಮೆ: ಪಕ್ಷೇತರನಾಗಿ ಕಣಕ್ಕೆ