ಭಟ್ಕಳ: ತಾಲೂಕಿನ ಪುರಸಭೆ ವ್ಯಾಪ್ತಿಯ ಪ್ರಮುಖ ಐತಿಹಾಸಿಕ ಹಿನ್ನೆಲೆಯುಳ್ಳ ಕೋಕ್ತಿ ಕೆರೆಯ ಹೂಳೆತ್ತುವ ಮತ್ತು ಸೈಡ್ ಪಿಚ್ಚಿಂಗ್ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದ್ದಾರೆ.
ಮಾಜಿ ಶಾಸಕರು ಹಾಗೂ ಸರಳತೆಯ ಪ್ರತಿರೂಪವಾದ ಡಾ. ಯು.ಚಿತ್ತರಂಜನ್ ಅವರ ಕನಸು ಕೋಕ್ತಿ ಕೆರೆಯ ಅಭಿವೃದ್ಧಿ. ಅಲ್ಲಿಂದ ಇಲ್ಲಿಯ ತನಕ ಎಲ್ಲಾ ಶಾಸಕರ ಪ್ರಯತ್ನ ನಡೆದಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಗೆ ಆಗಿರಲಿಲ್ಲ. ಕಣ್ಣ ಮುಂದೆಯೇ ಸಾಕಷ್ಟು ವರ್ಷ ತಾಲೂಕಿನ ಜನರಿಗೆ ಜೀವನಾಡಿಯಾಗಿದ್ದ ಕೋಕ್ತಿ ಕೆರೆಯಲ್ಲಿ ಹೂಳು ತುಂಬಿ ನೀರಿನ ಹರಿವಿಲ್ಲದೇ ಅವನತಿಯ ಅಂಚಿಗೆ ತಲುಪಿತ್ತು. ಈ ಬಗ್ಗೆ ಸಾಕಷ್ಟು ವರ್ಷಗಳ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆದರೆ ಈ ಬಾರಿ ಆಯ್ಕೆಯಾದ ಶಾಸಕ ಸುನೀಲ ನಾಯ್ಕ ಅವರು ತಮ್ಮ ಅವಧಿಯಲ್ಲಿ ಸತತ ಪ್ರಯತ್ನದಿಂದಾಗಿ ಕೋಕ್ತಿ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಕೆರೆಯಲ್ಲಿನ ಹೂಳು ಎತ್ತುವುದು ಹಾಗೂ ಸೈಡ್ ಪಿಚ್ಚಿಂಗ್ ನಿರ್ಮಾಣ ಕಾಮಗಾರಿಗೆ ಆರಂಭಿಸಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಇಲ್ಲಿನ ಕೋಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಕೆರೆಯ ಕಾಮಗಾರಿ ರೂಪುರೇಷೆಯ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.