ಕಾರವಾರ : ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಯಿಂದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗಲಿದೆ. ಮುಸ್ಲಿಂ ಸಮುದಾಯದವರನ್ನು ಒಪ್ಪಿಸಿ ಅದನ್ನು ಬಂದ್ ಮಾಡಿಸಬೇಕಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಅಂಕೋಲಾ ತಾಲೂಕಿನ ಬಳಲೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಸೀದಿಗಳಲ್ಲಿ ಧ್ವನಿವರ್ಧಕ ಬ್ಯಾನ್ ಮಾಡುವಂತೆ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಹೇಳಿಕೆ ನೀಡಿದಂತೆ, ಶ್ರೀರಾಮ ಸೇನೆ ಕೂಡ ದನಿಗೂಡಿಸಿದ ವಿಚಾರವಾಗಿ ಮಾತನಾಡಿದರು.
ಇದನ್ನು ಮುಸ್ಲಿಂ ಸಮಾಜವನ್ನು ಒಪ್ಪಿಸಿ ಮಾಡಬೇಕಿದೆ. ಓದುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂಬ ಮಾತು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ, ಅವರು ಮೊದಲಿನಿಂದ ಬಂದಂತಹ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡುತ್ತೇವೆ ಎಂದು ಹೇಳುತ್ತಾರೆ.
ಆದರೆ, ಇದರಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಅವರು ಮಸೀದಿಗಳಲ್ಲಿ ಜೋರಾಗಿ ಕೂಗ್ತಾರೆ. ಅದಕ್ಕೆ ಹನುಮಾನ್ ಚಾಲೀಸಾ ಮೈಕ್ನಲ್ಲಿ ಹಾಕಬೇಕು ಎಂದು ನಾವು ಸ್ಪರ್ಧೆ ಮಾಡಬಾರದು. ಮಸೀದಿ, ದೇವಸ್ಥಾನ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಲಾರಂಭಿಸಿದರೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದರು.
ಈ ಕಾರಣದಿಂದ ಮುಸ್ಲಿ ಸಮುದಾಯದ ಮುಖಂಡರೇ ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು. ದೇವಸ್ಥಾನ, ಚರ್ಚ್‌ಗಳಲ್ಲಿರುವ ಹಾಗೆ ಇತರರಿಗೆ ತೊಂದರೆಯಾಗದಂತೆ ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದರೆ ಸೂಕ್ತ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕ ನಿಷೇಧಿಸಲು ಆಗ್ರಹ: ರಾಜ್ ಠಾಕ್ರೆಗೆ ಸಿದ್ಧಲಿಂಗ ಸ್ವಾಮೀಜಿ ಬೆಂಬಲ
ತ್ರಿಮೂರ್ತಿಗಳಿಂದಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮುಸಲ್ಮಾನರನ್ನು ಎದುರು ಹಾಕಿಕೊಳ್ಳುವ ತಾಕತ್ತಿಲ್ಲ. ತಾಕತ್ತಿದ್ದರೂ ಮುಸಲ್ಮಾನರ ವೋಟ್ ಕಳೆದುಕೊಳ್ಳಲು ಇವರು ತಯಾರಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ಅಂಕೋಲಾದ ಮಾದನಗೇರಿಯಲ್ಲಿ ರಾಜಕೀಯ ಉದ್ದೇಶದಿಂದ ಬಿಜೆಪಿಗರು ಗಲಾಟೆ ಎಬ್ಬಿಸುತ್ತಿದ್ದಾರೆ ಎಂಬ ಕಾಂಗ್ರೆಸಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ಹಾಕಿಕೊಂಡು ಹೋಗದ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಳ್ಳಲು ಪ್ರಾರಂಭಿಸಿದರು. ಹಿಜಾಬ್ ಹಾಕಿಕೊಳ್ಳಲು ಬಿಜೆಪಿ ಹೇಳಿಲ್ಲ. ಆದರೆ, ಅವರಿಗೆ ಕಾಂಗ್ರೆಸ್, ಎಸ್‌ಡಿಪಿಐ, ಸಿಎಫ್‌ಐ ಅಥವಾ ಪಿಎಫ್‌ಐನ ಯಾರೋ ಸ್ಫೂರ್ತಿ ಕೊಟ್ಟಿದ್ದರು ಎಂದು ದೂರಿದರು.
ಮುಸ್ಲಿಂ ಲೀಡರ್ ಆಗಲು ಹೊರಟಿರುವ ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಧರಿಸಲು ಯಾಕೆ ಹೇಳಿಲ್ಲ?. ಕೋರ್ಟ್ ಮಧ್ಯಂತರ ಆದೇಶವಿದ್ದಾಗ ಎಸ್‌ಡಿಪಿಐ, ಪಿಎಫ್‌ಐ, ಎಸ್‌ಎಫ್‌ಐನವರು ಪ್ರತಿಭಟನೆ ಮಾಡಿ ಸಂವಿಧಾನದ ವಿರುದ್ಧವೇ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ನಡೆಸಿದವರನ್ನು ಬಂಧಿಸಿ, ಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಹಾಕಿದವರ ವಿರುದ್ಧ ಕ್ರಮಕ್ಕೆ ಸಿದ್ಧರಾಮಯ್ಯ ಹೇಳಬೇಕಿತ್ತು. ಆದ್ರೆ, ಹೇಳಿಲ್ಲ ಎಂದರು.
ಕೋರ್ಟ್ ಆದೇಶ ಉಲ್ಲಂಘಟನೆ ಮಾಡಿರುವ ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಕ್ಷಮೆ ಕೇಳಬೇಕು. ಮುಸಲ್ಮಾನರಿಗೆ ತೃಪ್ತಿಪಡಿಸಲು ಅವರು ಮಾಡಿದ್ದ ಪ್ರತಿಭಟನೆ ಪರವಾಗಿ ವಿಧಾನಸೌಧದಲ್ಲಿ ಮಾತನಾಡಿದ್ದರು. ಮುಸಲ್ಮಾನರು ಕೋರ್ಟ್ ಆದೇಶಕ್ಕೆ ಬಗ್ಗಿರುವುದನ್ನು ಸಿದ್ದರಾಮಯ್ಯ, ಡಿಕೆಶಿ ಹಾಗೂ ಕುಮಾರಸ್ವಾಮಿಗೆ ನೋಡಲಾಗುತ್ತಿಲ್ಲ. ಇವರಿಗೆ ಹಿಂದೂ ಸಮಾಜದ ಒಂದು ವೋಟು ಕೂಡ ಕಿತ್ತುಕೊಳ್ಳಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುವಂತೆ ಈ ತ್ರಿಮೂರ್ತಿಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಕುರಿಗಾಹಿಗಳಿಗೆ ತೊಂದರೆಯಾಗಲ್ಲ: ರಾಜ್ಯದಲ್ಲಿ ಎದ್ದಿರುವ ಹಲಾಲ್ ಹಾಗೂ ಜಟ್ಕಾ ಮಾಂಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಹಲಾಲ್ ಮುಸಲ್ಮಾರ ಪದ್ಧತಿ. ಜಟ್ಕಾ ಹಿಂದೂಗಳ ಪದ್ಧತಿ. ಯಾರ್ಯಾರಿಗೆ ಹೇಗೇಗೆ ಬೇಕೋ ಆ ರೀತಿಯಲ್ಲಿ ಮಾಂಸ ತಿನ್ನಲಿ. ಇದರಲ್ಲಿ ಸಂಘರ್ಷ ಮಾಡಬೇಕೆಂದೇನಿಲ್ಲ. ಜಟ್ಕಾ ಹಾಗೂ ಹಲಾಲ್ ಮುಖಾಂತರವೇ ತಿನ್ನಬೇಕೆಂದು ಹೇಳಿದ್ರೆ ಅದು ತಪ್ಪು. ಇದೆಲ್ಲಾ ನಮ್ಮ ವೈಯಕ್ತಿಕ ವಿಚಾರ. ಹಲಾಲ್ ಮುಖಾಂತರ ತಿಂದರೂ ಖರ್ಚಾಗುತ್ತೆ, ಜಟ್ಕಾ ಮುಖಾಂತರ ತಿಂದರೂ ಖರ್ಚಾಗುತ್ತದೆ. ಹಲಾಲ್, ಜಟ್ಕಾ ವಿಚಾರದಲ್ಲಿ ವ್ಯಾಪಾರದಲ್ಲಿ ಬದಲಾವಣೆ ಆಗಬಹುದು. ಆದ್ರೆ, ಕುರಿಗಾಹಿಗಳಿಗೆ ಇದರಿಂದ ಯಾವುದೇ ತೊಂದರೆಯಾಗಲ್ಲ ಎಂದರು.