ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಯಿಂದ ಹಾನಿಯಾದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ಅಂಕೋಲಾದ ಡೊಂಗ್ರಿ, ಸುಂಕಸಾಳ, ರಾಮನಗುಳಿ ಸೇರಿದಂತೆ ಕುಮಟಾ, ಯಲ್ಲಾಪುರ ಭಾಗಗಳಿಗೆ ತೆರಳಿ ಸಂತ್ರಸ್ತರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ಅಲ್ಲದೆ ಈ ಭಾಗದಲ್ಲಿ ಕೊಚ್ಚಿ ಹೋಗಿರುವ ಸೇತುವೆಗಳಿಂದ ಉಂಟಾದ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಗುಳ್ಳಾಪುರ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಮನೆಯಲ್ಲಿನ ಪಾತ್ರೆ, ಬಟ್ಟೆ ಇನ್ನಿತರೆ ಅಗತ್ಯ ಸಾಮಾನುಗಳನ್ನು ಕಳೆದುಕೊಂಡವರಿಗೆ ತಕ್ಷಣ ತಾತ್ಕಾಲಿಕ ಪರಿಹಾರವಾಗಿ ₹ 10 ಸಾವಿರ ಹಾಗೂ ಮನೆ ಗೋಡೆಗಳು ಕುಸಿದಿದ್ದರೆ ₹ 25 ಸಾವಿರ ನೀಡಿ. ಇವುಗಳಿಗೆ ಹೆಚ್ಚಿನ ದಾಖಲೆ ಕೇಳಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯಲ್ಲಾಪುರ, ಅಂಕೋಲ, ಕುಮಟಾ, ಕಾರವಾರದ ವಿವಿಧ ಪ್ರವಾಹ ಪರಿಸ್ಥಿತಿಯ ಅಧ್ಯಯನ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುವುದು. ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದ್ದು. ಇದಕ್ಕೆ ಹಣಕಾಸಿನ ಕೊರತೆ ಇಲ್ಲ. ಪ್ರಸ್ತುತ ಬಿಡುಗಡೆ ಮಾಡಲಾದ ಅನುದಾನ ಖರ್ಚಾದ ಬಳಿಕ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ₹ 1 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಿದೆ ಎಂದರು.
ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಪೋಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜ್, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.