ಕಾರವಾರ: ಕೊರೊನಾ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಟಫ್ ರೂಲ್ಸ್ ಜಾರಿಗೊಳಿಸಿದ್ದು, 14 ದಿನಗಳ ಕೊರೊನಾ ಕರ್ಫ್ಯೂ ವಿಧಿಸಿದೆ. ಸರ್ಕಾರದ ಈ ನಿಲುವಿನಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹೊರ ರಾಜ್ಯ ಕಾರ್ಮಿಕರು ಕಂಗಾಲಾಗಿದ್ದು, ಗಂಟು ಮೂಟೆ ಕಟ್ಟಿಕೊಂಡು ಇದೀಗ ರೈಲು ಹಾಗೂ ಬಸ್‌ಗಳ ಮೂಲಕ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ಅಬ್ಬರ ದಿನೇ ದಿನೆ ಹೆಚ್ಚುತ್ತಿದ್ದು, ಸಾವಿನ ಪ್ರಮಾಣ ಕೂಡ ಏರಿಕೆಯಲ್ಲಿದೆ. ಇದೇ ಕಾರಣಕ್ಕೆ ಕೊರೊನಾ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ರಾಜ್ಯಾದ್ಯಂತ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಿದ್ದು ಸದ್ಯ ನಾಳೆಯಿಂದ 14 ದಿನಗಳ ಕಾಲ ಕೋವಿಡ್ ಕರ್ಫ್ಯೂ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದ ಬಳಿಕ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಕಂಪನಿಗಳು ಕೆಲಸ ಸ್ಥಗಿತಗೊಳಿಸಿರುವುದರಿಂದ ಹೊರರಾಜ್ಯದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಮತ್ತೊಂದೆಡೆ ಕೊರೊನಾ ಹಬ್ಬುವ ಭೀತಿಯೂ ಹೆಚ್ಚಿದ್ದು, ಈ ಎಲ್ಲ ಕಾರಣಗಳಿಂದ ಉತ್ತರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ ಮುಂತಾದೆಡೆಯಿಂದ ಬಂದಿದ್ದ ಕಾರ್ಮಿಕರು ತಮ್ಮ ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ಮತ್ತೆ ಊರುಗಳತ್ತ ಹೊರಟಿದ್ದಾರೆ.
ಇನ್ನು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿರುವ ಕಾರ್ಮಿಕರಿಗೆ ಸಚಿವ ಶಿವರಾಮ ಹೆಬ್ಬಾರ್ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದು, ಜನರು ಭೀತಿಗೊಳಗಾಗುವ ಯಾವುದೇ ಅವಶ್ಯಕತೆಯಿಲ್ಲ. ದೇಶದಲ್ಲಿ ಈಗಾಗಲೇ ಲಸಿಕೆ ಸಿದ್ಧವಾಗಿದ್ದು, ಕಾರ್ಮಿಕರಿಗೂ ಕೂಡಾ ಲಸಿಕೆ ವಿತರಣೆ ನಡೆಯಲಿದೆ. ಯಾವುದೇ ಕಾರ್ಮಿಕರು ಕೊರೊನಾ ಭೀತಿಯಿಂದ ಹೆದರಿ ಮತ್ತೆ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಬೇಕಾಗಿಲ್ಲ. ತಮ್ಮ ತಮ್ಮ ಸುರಕ್ಷತೆ ವಹಿಸಿಕೊಂಡಲ್ಲಿ ಸರ್ಕಾರ ಲಸಿಕೆ ಒದಗಿಸುವ ಕೆಲಸ ನಡೆಸುತ್ತದೆ ಎಂದು ತಿಳಿಸಿದ್ದಾರೆ. ಆದರೂ ಜನರು ಹೆದರಿ ಊರುಗಳಿಗೆ ವಾಪಸ್ ಹೋಗ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕರಿಲ್ಲದೇ ನಗರಗಳ ಅಭಿವೃದ್ಧಿ ಕಾಮಗಾರಿಗಳು ಮತ್ತೆ ನಿಧಾನಗತಿಯಲ್ಲಿ ಸಾಗುವ ಸಾಧ್ಯತೆಗಳು ದಟ್ಟವಾಗಿದೆ.