ಭಟ್ಕಳ: ಪುರಸಭೆ ವ್ಯಾಪ್ತಿಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಂಡ ಹೊಸ ಮೀನು ಮಾರುಕಟ್ಟೆಗೆ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿನ ಮಹಿಳಾ ಮೀನು ವ್ಯಾಪಾರಿಗಳನ್ನು ಸ್ಥಳಾಂತರಿಸುವ ವಿಚಾರವಾಗಿ ಇಂದು ಸಭೆ ನಡೆಯಿತು.
ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು, ಪುರಸಭೆ ಸದಸ್ಯರು ಹಾಗೂ ಮಹಿಳಾ ಮೀನು ವ್ಯಾಪಾರಿಗಳನ್ನೊಳಗೊಂಡಂತೆ ಎಲ್ಲರಿಂದ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರದ ವಿಚಾರವಾಗಿ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ದೇವರಾಜು ಈ ಹಿಂದಿನ ವಸ್ತುಸ್ಥಿತಿ ಹಾಗೂ ಹೊಸ ಮೀನು ಮಾರುಕಟ್ಟೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಸವಿವರವಾಗಿ ಹೇಳಿದ್ರು.
ನಂತರ ಮುಖಂಡರಾದ ಕೃಷ್ಣ ನಾಯ್ಕ ಆಸರಕೇರಿ, ಪುರಸಭೆಯೂ ಈಗಾಗಲೇ ಮೀನು ಮಾರುಕಟ್ಟೆಯ ಸ್ಥಳಾಂತರಕ್ಕೆ ಸಿದ್ಧವಾಗಿದ್ದು ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮೀನು ಮಾರುಕಟ್ಟೆ ಅವಲಂಬಿತ ಸಾಕಷ್ಟು ಅಂಗಡಿ, ಮುಂಗಟ್ಟುಗಳಿವೆ. ಇದು ಒಂದು ಜನನಿಬಿಡ ಪ್ರದೇಶವಾಗಿದ್ದು, ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುವುದರಿಂದ ಸಾಕಷ್ಟು ಕಡೆಯ ಜನರಿಗೆ ಹಳೇ ಮೀನು ಮಾರುಕಟ್ಟೆಯೂ ಸಮೀಪವಾಗಿದೆ. ಈಗ ಅದು ಸ್ಥಳಾಂತರಗೊಂಡರೆ ಸಮಸ್ಯೆಯಾಗಲಿದೆ ಎಂದ್ರು.
ಮುಖ್ಯ ವ್ಯಾಪಾರ ವಹಿವಾಟು ಕೇಂದ್ರವಾಗಿರುವ ಮೀನು ಮಾರುಕಟ್ಟೆ ನಮಗೆ ಬೇಕು. 30 ವರ್ಷಕ್ಕಿಂತ ಹೆಚ್ಚು ಹಳೆಯದಾದ ಈ ಮಾರುಕಟ್ಟೆಯಿಂದ ಸಾಕಷ್ಟು ಮೀನು ವ್ಯಾಪಾರಸ್ಥರು ಜೀವನ ಕಟ್ಟಿಕೊಂಡಿದ್ದಾರೆ. ಹಾಗಾಗಿ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಲು ನಮ್ಮ ಸಮ್ಮತಿಯಿಲ್ಲ ಎಂದ್ರು.
ಹೊಸ ಮಾರುಕಟ್ಟೆಗೆ ಮಹಿಳಾ ಮೀನು ವ್ಯಾಪಾರಸ್ಥರನ್ನು ಸ್ಥಳಾಂತರಿಸಬೇಕಿದ್ದಲ್ಲಿ ಮೊದಲು ರಂಗಿನಕಟ್ಟೆ, ಸಂಶುದ್ದೀನ್ ಸರ್ಕಲ್, ಚೌಥನಿ ರಸ್ತೆ ಪಕ್ಕದಲ್ಲಿ ಮೀನು ವ್ಯಾಪಾರ ಮಾಡುವವರನ್ನು ಕರೆದು ಹೊಸ ಮಾರುಕಟ್ಟೆಗೆ ಕಳುಹಿಸಿರಿ ಎಂದು ಮೀನು ವ್ಯಾಪಾರಸ್ಥ ಸಾದಿಕ್ ಒತ್ತಾಯಿಸಿದರು.
ಅಂಗಡಿಗಾರ ಮಣಿ ಪೂಜಾರಿ, ಈಗಾಗಲೇ ಪುರಸಭೆಯ ಅವೈಜ್ಞಾನಿಕ ನಿರ್ಧಾರದಿಂದ ಅಂಗಡಿ ವಿಚಾರಕ್ಕೆ ಒಂದು ಜೀವ ಹೋಗಿದೆ. ಇನ್ನು ಈ ವಿಚಾರದಲ್ಲಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಇನ್ನೊಂದು ಜೀವ ಹೋಗದಂತೆ ಮಾಡಬೇಡಿ ಎಂದು ಎಚ್ಚರಿಸಿದರು.
ಸಭೆಯ ಅಂತ್ಯದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಅಧಿಕಾರಿಗಳು ಎಷ್ಟು ಬಾರಿಯಾದರೂ ಸಭೆ ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಬಹುದಾಗಿದೆ. ಇದು ತಪ್ಪು ಎನ್ನುವುದು ಸಮಂಜಸವಲ್ಲ. ಒಂದು ಮೀನು ಮಾರುಕಟ್ಟೆ ಸ್ಥಳಾಂತರ ವಿಚಾರದಲ್ಲಿ ಸಾಕಷ್ಟು ಅಭಿಪ್ರಾಯ, ಸಲಹೆಗಳ ಅವಶ್ಯಕತೆ ಇರುತ್ತದೆ. ಸುಮ್ಮನೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆ ಮಾಡಿ ನಿರ್ಧಾರ ತೆಗೆದುಕೊಂಡ್ರು ಎಂಬ ಆಪಾದನೆ ಬರಬಾರದು. ಈ ಹಿಂದೆ ಪುರಸಭೆ ಅಧಿಕಾರಿಗಳಿಗೆ ಮಹಿಳಾ ಮೀನು ವ್ಯಾಪಾರಿಗಳಿಗೆ ಒಂದು ವರ್ಷದ ಅವಧಿಯವರೆಗೆ ಅವರ ವ್ಯಾಪಾರಕ್ಕೆ ಸಮಸ್ಯೆ ಮಾಡಬೇಡಿ ಎಂದು ಸೂಚಿಸಿದ್ದೆ. ಅದರಂತೆ ಅವರ ವಿರುದ್ಧವಾಗಿ ನಾನು ಯಾವುದೇ ಕಾರ್ಯ ಮಾಡುವುದಿಲ್ಲ. ಮೀನು ಮಾರುಕಟ್ಟೆ ಸ್ಥಳಾಂತರದ ಅಭಿಪ್ರಾಯದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಇನ್ನೊಮ್ಮೆ ಚರ್ಚಿಸಿ ತೀರ್ಮಾನ ತಿಳಿಸಲಾಗುವುದು ಎಂದರು.