ಶಿರಸಿ (ಉತ್ತರಕನ್ನಡ) : ಸರ್ಕಾರದ ಅನುದಾನ ಸದ್ಬಳಕೆ ಆಗದೆ ಹಣ ಪೋಲು ಆಗುವ ಹಲವು ನಿದರ್ಶನಗಳನ್ನು ನಾವು ಕಾಣಬಹುದಾಗಿದೆ. ಅಂತಹದ್ದೊಂದು ಉದಾಹರಣೆ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಂದಾಜು 2 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಿದ ಯಾತ್ರಿ ನಿವಾಸ ಸಂಪೂರ್ಣ ಪಾಳು ಬಿದ್ದಿದೆ. ಒಂದು ದಿನವೂ ಬಳಕೆಯಾಗದೆ ಮಾಡಿದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಶಿರಸಿಯ ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿತ್ತು. ಅದನ್ನು ಮಾರಿಕಾಂಬಾ ಯಾತ್ರಿ ನಿವಾಸ ಎಂದೇ ಕರೆಯಲಾಗುತ್ತಿದೆ. ಆದರೆ ನಿವಾಸ ನಿರ್ಮಾಣವಾಗಿ 4 ವರ್ಷ ಕಳೆದರೂ ಸಹ ಸಾರ್ವಜನಿಕರ ಬಳಕೆಗೆ ಸಿಕ್ಕಿಲ್ಲ. ಇದಕ್ಕೆ ಕಾರಣ ಶೌಚಾಲಯಕ್ಕೆ ಇಂಗುಗುಂಡಿ (ಸೋಕ್‍ಪಿಟ್) ನಿರ್ಮಾಣಗೊಳ್ಳದ ಕಾರಣವಾಗಿದ್ದು, ಈ ಬಗ್ಗೆ ಹಲವು ಬಾರಿ ಇಲಾಖೆಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ. ಈ ಕಾರಣಕ್ಕೆ ದೇವಾಲಯವೂ ಯಾತ್ರಿ ನಿವಾಸವನ್ನು ತಮ್ಮ ಸುಪರ್ದಿಗೆ ಪಡೆಯದೆ ಇದ್ದರಿಂದ ಸಂಪೂರ್ಣವಾಗಿ ಪಾಳು ಬಿದ್ದಿದೆ.
ಯಾತ್ರಿ ನಿವಾಸ ನಿರ್ಮಾಣ: ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನಕ್ಕೆ ದೂರದ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅವರು ಉಳಿದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಗೋಲಗೇರಿ ಓಣಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಗೊಂಡಿದೆ. ಎರಡು ಮಹಡಿಯ ಕಟ್ಟಡದಲ್ಲಿ ಸಭಾಭವನ, ಕೊಠಡಿಗಳು ಇವೆ. ಆದರೆ, ಶೌಚಾಲಯದ ಸಮಸ್ಯೆ ಉಂಟಾಗಿದೆ.
ಇದನ್ನು ಕ್ರೆಡಿಲ್ ಸಂಸ್ಥೆಯವರು ನಿರ್ಮಿಸಿದ್ದು, ಈಗ ಅವರೂ ತಮ್ಮ ಬಳಿ ಹಣವಿಲ್ಲ ಎಂದು ಕೈಚೆಲ್ಲಿದ್ದಾರೆ. ಹೀಗಾಗಿ ಇಲಾಖೆಗಳ ಹಠಮಾರಿ ಧೋರಣೆಗೆ ಪ್ರವಾಸಿಗರು ತೊಂದರೆ ಪಡುವಂತಾಗಿದ್ದು, ಈ ಕಾಮಗಾರಿ ಸರಿಪಡಿಸದೇ ಹೋದಲ್ಲಿ ಈಗ ಪ್ರತಿಭಟನೆ ನಡೆಸುವ ಬಗ್ಗೆಯೂ ಎಚ್ಚರಿಕೆ ನೀಡಲಾಗುತ್ತಿದೆ.
ನೆಲದ ಮೇಲೆ ಮಲಗುವ ಸ್ಥಿತಿ: ಒಟ್ಟಾರೆ, ನೂರಾರು ಭಕ್ತಾಧಿಗಳ, ಪ್ರವಾಸಿಗರ ಅನುಕೂಲಕ್ಕೆ ಆಗಬೇಕಿದ್ದ ಕೋಟ್ಯಂತರ ರೂ. ವೆಚ್ಚದ ಕಟ್ಟಡ ಪಾಳು ಬಿದ್ದಿದೆ. ಈಗಲೂ ದೇವಾಲಯಕ್ಕೆ ಬಂದವರು ರಾತ್ರಿ ಅಲ್ಲಿಯೇ ನೆಲದ ಮೇಲೆ ಮಲಗುವ ಸ್ಥಿತಿ ಇದೆ. ಈಗ ಯಾತ್ರಿ ನಿವಾಸ ಪುನಃ ತೆರೆಯಲು 50 ಲಕ್ಷ ರೂ. ಖರ್ಚು ಮಾಡಬೇಕಾದ ಸ್ಥಿತಿಯಿದೆ. ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಜನರಿಗೆ ಅನುಕೂಲ ಮಾಡಿಕೊಡಲಿ ಎನ್ನುವುದು ಎಲ್ಲರ ಆಶಯ.
ಓದಿ: ಕೋವಿಡ್ ನಂತರ ಮೈಕೊಡವಿ ನಿಂತ ಅರಮನೆಗಳ ನಗರಿ ಮೈಸೂರಿನ ಪ್ರವಾಸೋದ್ಯಮ