ಕಾರವಾರ: ಹಣ್ಣುಗಳ ರಾಜ ಎಂದೇ ಖ್ಯಾತಿಯಾಗಿರುವ ಮಾವಿನಹಣ್ಣಿನ ಸೀಸನ್ ಈಗ ಪ್ರಾರಂಭವಾಗಿದೆ. ಮಾರುಕಟ್ಟೆಯಲ್ಲಿ ವಿಧ ವಿಧವಾದ ಮಾವಿನ ಹಣ್ಣುಗಳು ಲಗ್ಗೆ ಇಡುವ ಮೂಲಕ ಗ್ರಾಹಕರನ್ನ ಕೈ ಬೀಸಿ ಕರೆಯುತ್ತಿವೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯುವ ಪ್ರಸಿದ್ದ ಕರಿ ಈಶಾಡು ಜಾತಿಗೆ ಸೇರಿದ ಮಾವು ಸಹ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಅಪರೂಪದ ಮಾವು ಎನ್ನಲಾದ ಈ ಕರಿಈಶಾಡು ಮಾವನ್ನು ಕೇವಲ ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ ಹಾಗೂ ಕುಮಟಾದ ಕೆಲ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಅದರಲ್ಲೂ ಅಂಕೋಲಾ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನ ಬೆಳೆಯುತ್ತಾರೆ. ಕರಿಈಶಾಡ ಮಾವು ಪ್ರತಿವರ್ಷ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಬರುವುದರಿಂದ ಮಾವು ಬೆಳೆದ ಹಾಲಕ್ಕಿ ಮಹಿಳೆಯರು ಹೆದ್ದಾರಿ ಪಕ್ಕ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಜೊತೆಗೆ ಸ್ಥಳೀಯವಾಗಿ ಬೆಳೆಯುವ ಪೈರಿ, ಬನಾಟೆ ಆಪೂಸ್, ರತ್ನಗಿರಿ ತಳಿಯ ಮಾವಿನ ಹಣ್ಣುಗಳನ್ನ ಸಹ ಮಾರಾಟಕ್ಕೆ ತರುತ್ತಾರೆ.
ಈ ಬಾರಿ ಕರಿಈಶಾಡು ಮಾವಿನ ಹಣ್ಣಿಗೆ 300 ರಿಂದ 500 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿದ್ದು, ಉಳಿದಂತೆ ಇತರೆ ಹಣ್ಣುಗಳು 150 ರಿಂದ 400 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿವೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಮಾವಿನಹಣ್ಣು ಹೆಚ್ಚು ಕಂಡುಬಂದಿರಲಿಲ್ಲ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಾವಿನಹಣ್ಣು ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರು ಸಹ ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: ಆಜಾನ್ - ಭಜನೆ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಶೀಘ್ರದಲ್ಲೇ ಮಾರ್ಗಸೂಚಿ