ಕಾರವಾರ: ಮಾವು, ಮಾವಿನಕಾಯಿ ಅಂದ್ರೆ ಯಾರಿಗಾದ್ರೂ ಒಮ್ಮೆ ಬಾಯಲ್ಲಿ ನೀರು ಬರದೇ ಇರದು. ಮಾವಿನ ಹಣ್ಣಾಗಲಿ, ಮಾವಿನಕಾಯಿಯ ಉತ್ಪನ್ನಗಳನ್ನಾಗಲಿ ಇಷ್ಟಪಡದವರೇ ಇಲ್ಲ. ಹೀಗೆ ಮಾವಿನಹಣ್ಣು, ಮಾವಿನಕಾಯಿಯ ಉತ್ಪನ್ನಗಳನ್ನ ಇಷ್ಟಪಡುವವರಿಗೆ ಅಂತಾನೇ ಇಲ್ಲೊಂದು ಕಡೆ ವಿನೂತನ ಮಾದರಿಯಲ್ಲಿ ಮಾವು ಮೇಳವನ್ನ ಆಯೋಜಿಸಲಾಗಿತ್ತು.
ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ನಷ್ಟದಲ್ಲಿರುವ ಮಾವು ಬೆಳೆಗಾರರಿಗೆ ನೆರವಾಗಲು ಹಾಗೂ ದಲ್ಲಾಳಿಗಳ ಮಧ್ಯಸ್ಥಿಕೆಯಿಲ್ಲದೆ ಗ್ರಾಹಕರಿಗೆ ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟಭರಿತ ಮಾವಿನ ಹಣ್ಣುಗಳನ್ನು ಒದಗಿಸುವ ಉದ್ದೇಶದಿಂದ ಅಂಕೋಲಾ ಬೆಳೆಗಾರರ ಸಮಿತಿ ವತಿಯಿಂದ ಅಂಕೋಲಾ ಪಟ್ಟಣದ ಜೈಹಿಂದ್ ಮೈದಾನದಲ್ಲಿ ಎರಡು ದಿನಗಳ ಮಾವು ಮೇಳವನ್ನ ಹಮ್ಮಿಕೊಳ್ಳಲಾಗಿತ್ತು.
ಮೇಳದಲ್ಲಿ ಕೇಸರ್, ಆಪುಸ್, ರತ್ನಗಿರಿ, ನೀಲಂ, ಪೈರಿ, ಕರಿಈಶಾಡ್, ಮುಂಡಪ್ಪ, ತೋತಾಪುರಿ ಹೀಗೆ ಸ್ಥಳೀಯ ಹಾಗೂ ಹೊರ ರಾಜ್ಯದ ಮಾವಿನಹಣ್ಣಿನ ತಳಿಗಳನ್ನ ಮಾರಾಟಕ್ಕೆ ಇರಿಸಲಾಗಿತ್ತು. ಹೀಗಾಗಿ ಗ್ರಾಹಕರು ಕೂಡ ಮುಗಿಬಿದ್ದು ಡಜನ್‌ಗಟ್ಟಲೇ ಮಾವಿನಹಣ್ಣುಗಳನ್ನ ಖರೀದಿಸಿ ಕೊಂಡೊಯ್ಯುತ್ತಿದ್ದುದು ಮಾವು ಬೆಳೆಗಾರರು ಹಾಗೂ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಾವಿನಹಣ್ಣಿನ ಜೊತೆಗೆ ಬಾಯಲ್ಲಿ ನೀರೂರಿಸುವ ಅಪ್ಪೆಮಿಡಿ, ಮಾವಿನಮಿಡಿ, ಜೀರಿಗೆ ಮಿಡಿ, ಮಸಾಲೆ ಉಪ್ಪಿನಕಾಯಿ, ಮಾವಿನಕಾಯಿ ಹಪ್ಪಳ ಸೇರಿದಂತೆ ಬಗೆ ಬಗೆಯ ಮಾವಿನ ಉತ್ಪನ್ನಗಳು ಕೂಡ ಒಂದೇ ಸೂರಿನಡಿ ಲಭ್ಯವಾಗುವಂತೆ ಆಯೋಜಿಸಲಾಗಿತ್ತು. ಎರಡು ದಿನಗಳ ಕಾಲ ನಡೆಯುವ ಮೇಳದಲ್ಲಿ ಸ್ಥಳೀಯ ಬೆಳೆಗಾರರು ಹಾಗೂ ವ್ಯಾಪಾರಸ್ಥರೇ ಭಾಗವಹಿಸಿದ್ದರು. ತರಹೇವಾರಿ ಮಾವಿನಹಣ್ಣಿನ ತಳಿಗಳನ್ನ ಮಾರಾಟಕ್ಕೆ ಇರಿಸಿದ್ದರು.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಮಾವು ಮೇಳವನ್ನ ಅಂಕೋಲಾದಲ್ಲಿ ಆಯೋಜಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆಯ ಜೊತೆಗೆ ಭರ್ಜರಿ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ಇಂಥ ಮೇಳಗಳು ಪ್ರತಿವರ್ಷವೂ ಆಯೋಜನೆಯಾಗುತ್ತಿದ್ದರೆ ಬೆಳೆಗಾರರಿಗೂ ಅನುಕೂಲ, ಗ್ರಾಹಕರೂ ಒಂದೇ ಸೂರಿನಡಿ ಹಲವು ತಳಿಯ ಮಾವಿನಹಣ್ಣು ಹಾಗೂ ಅದರ ಉತ್ಪನ್ನಗಳನ್ನು ಖರೀದಿಸಬಹುದು ಎನ್ನುತ್ತಾರೆ ಗ್ರಾಹಕರು.
ಓದಿ: ಮೇ ತಿಂಗಳಿನಲ್ಲಿ ಹಿಂದೆಂದೂ ಆಗದ ಮಳೆ ಈ ಬಾರಿ ಆಗಿದೆ : ಸಚಿವ ಹಾಲಪ್ಪ ಆಚಾರ್