ಕಾರವಾರ: ಗಣೇಶ ಚತುರ್ಥಿ ಮುಗಿದು ಸುಮಾರು ಆರು ತಿಂಗಳುಗಳೇ ಕಳೆದಿದೆ. ಆದರೂ ಕಾರವಾರದ ಕೆಲ ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜಿಸಲಾಗುತ್ತಿದೆ.
ಹೌದು, ಸಾಮಾನ್ಯವಾಗಿ ಗಣೇಶ ಚತುರ್ಥಿ ಎಂದಾಕ್ಷಣ ಮಳೆಗಾಲ ನೆನಪಾಗುತ್ತದೆ. ಈ ವೇಳೆ ತರುವ ಗಣೇಶನನ್ನು ದಿನ, ವಾರ ಇಲ್ಲವೇ ತಿಂಗಳುಗಳ ಕಾಲ ಇಟ್ಟು ಪೂಜಿಸುವುದು ವಾಡಿಕೆ. ಆದರೆ ಮಾಘ ಮಾಸದಲ್ಲಿ ಬರುವ ಮಾಘ ಚೌತಿಯನ್ನು ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಆಚರಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಗಣೇಶ ಚತುರ್ಥಿಯಂತೆ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅದರಲ್ಲೂ ಕಾರವಾರದಲ್ಲಿ ಮಾಘ ಚತುರ್ಥಿಯನ್ನು ಗಣೇಶ ಚತುರ್ಥಿಯಷ್ಟೆ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.
![undefined](https://s3.amazonaws.com/saranyu-test/etv-bharath-assests/images/ad.png)
ತಾಲೂಕಿನ ಮಾಜಾಳಿಯ ಗಾಂವಗೇರಿ ರಾಮನಾಥ್ ಕ್ಲಬ್ನವರು ಪ್ರತಿಷ್ಠಾಪಿಸಿದ್ದ ಸರ್ವಜನಿಕ ಗಣೇಶನ ಮೂರ್ತಿ ಎಲ್ಲರ ಗಮನ ಸೆಳೆಯಿತು. ಬೃಹತ್ ಗಣೇಶನನ್ನು ಮಧ್ಯಾಹ್ನದ ವೇಳೆಗೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಇದೆ ವೇಳೆ ಕಾರವಾರದ ವಿವಿಧ ಭಾಗಗಳಲ್ಲಿ ಮತ್ತು ಜಿಲ್ಲೆಯ ಇತರೆಡೆಯೂ ಗಣೇಶನನ್ನು ತಂದು ಪೂಜಿಸಲಾಯಿತು.
ಯಾರೆಲ್ಲ ಪ್ರತಿಷ್ಠಾಪಿಸುತ್ತಾರೆ?
ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚತುರ್ಥಿ ವೇಳೆ ಸೂತಕ, ಇಲ್ಲವೇ ಇನ್ನಾವುದೇ ಕಾರಣದಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗದವರು, ಹರಕೆ ಹೊತ್ತವರು ಗಣೇಶ ಹುಟ್ಟಿದ ದಿನವಾದ ಮಾಘ ಮಾಸ ಚತುರ್ಥಿಯಲ್ಲಿ ಗಣೇಶನನ್ನು ತಂದು ಪೂಜಿಸುತ್ತಾರೆ. ಚತುರ್ಥಿಯಂತೆ ಈಗಲೂ ಕೂಡ ಎಲ್ಲೆಡೆ ಸಂಭ್ರಮ ಮನೆ ಮಾಡಿರುತ್ತದೆ. ಗಣೇಶನನ್ನು ತರುವ ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು ಕೇವಲ ಒಂದು ದಿನ ಮಾತ್ರ ಇಟ್ಟು ಪೂಜಿಸುತ್ತಾರೆ ಎಂದು ಮಾಜಿ ಎಂಎಲ್ ಶುಭಲತಾ ಅಸ್ನೋಟಿಕರ್ ತಿಳಿಸಿದ್ದಾರೆ.
ಮಹಾರಾಷ್ಟ್ರ, ಗೋವಾ ಭಾಗದಲ್ಲಿ ಹೆಚ್ಚು ಆಚರಣೆ:
ಇನ್ನು ಮಾಘ ಚತುರ್ಥಿಯ ಆಚರಣೆ ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿರುವುದರಿಂದ ಪಕ್ಕದ ರಾಜ್ಯವಾದ ಕಾರವಾರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆಚರಣೆ ಮಾಡುತ್ತಾರೆ. ಒಟ್ಟಿನಲ್ಲಿ ಗಣೇಶ ಚತುರ್ಥಿ ಮುಗಿದು ಆರು ತಿಂಗಳು ಕಳೆದಿದೆ. ಅಂದು ಹಬ್ಬದ ಸಂಭ್ರಮ ಸವಿಯದವರು ಇದೀಗ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.