ಭಟ್ಕಳ: ವ್ಯಕ್ತಿಯೋರ್ವನ ಕೊರೊನಾ ಸೋಂಕು ಇದ್ದರೂ ಆತನ ವರದಿಯನ್ನು ನೆಗೆಟಿವ್ ಎಂದು ವೆನ್ಲಾಕ್ ಆಸ್ಪತ್ರೆ ವರದಿ ನೀಡಿದೆ ಎಂಬ ಆರೋಪ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೇಳಿಬಂದಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿಯ ಅಚಾತುರ್ಯದಿಂದಾಗಿ ಆತನನ್ನು ಮನೆಗೆ ಕಳುಹಿಸಲಾಗಿದೆ. ಆದ್ರೆ, ಸೋಂಕಿತ ಯಲ್ಲಾಪುರದ ಮನೆಗೆ ತೆರಳುತ್ತಿದ್ದಾಗ ಆತನನ್ನು ತಡೆದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಂದು ಕಾರವಾರ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.
ನೆಗೆಟಿವ್ ವರದಿ ಬಂದಿದೆ ಎಂದು ಮಂಗಳೂರಿನಿಂದ ಯಲ್ಲಾಪುರಕ್ಕೆ ಹೋಗುತ್ತಿದ್ದ ಯುವಕನೋರ್ವನ ವರದಿಯು ಭಟ್ಕಳ ತಲುಪುತ್ತಿದ್ದಂತೆ ಪಾಸಿಟಿವ್ ಆಗಿತ್ತು. ಆದರೆ ಈ ವಿಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಗಮನಿಸದೆ ಮನೆಗೆ ತೆರಳಲು ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಯಲ್ಲಾಪುರ ಮೂಲದ 29 ವರ್ಷದ ಯುವಕ ಜೂನ್ 17 ರಂದು ಕುವೈತ್‍ನಿಂದ ಮಂಗಳೂರಿಗೆ ಬಂದಿದ್ದಾನೆ. ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಸ್ಯಾಂಪಲ್‍ಗಳನ್ನು ನೀಡಿ ಹೋಟೆಲ್ ಕ್ಯಾರಂಟೈನ್‍ನಲ್ಲಿದ್ದ. ಬುಧವಾರಕ್ಕೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಕ್ತಾಯಗೊಂಡ ಹಿನ್ನೆಲೆ ಹೋಟೆಲ್ ಮ್ಯಾನೇಜರ್ ಬಂದು ನಿಮ್ಮ ವರದಿ ನೆಗೆಟಿವ್ ಬಂದಿದೆ, ನೀವಿನ್ನು ಮನೆಗೆ ಹೋಗಬಹುದು ಎಂದು ಆಸ್ಪತ್ರೆಯಿಂದ ತಿಳಿಸಿದ್ದಾರೆ ಎಂದಿದ್ದರಂತೆ. ನಂತರ ಆಸ್ಪತ್ರೆಯ ಸಿಬ್ಬಂದಿ ಆ ಯುವಕನ ಕೈಗೆ ಹೋಂ ಕ್ವಾರಂಟೈನ್ ಮುದ್ರೆಯನ್ನು ಹಾಕಿ ಮನೆಗೆ ಹೋಗಲು ಅನುಮತಿ ನೀಡಿದ್ದಾರೆ. ಮಂಗಳೂರಿನಿಂದ ಒಟ್ಟು 20 ಮಂದಿ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ಗೆ ತೆರಳಿದ್ದಾರೆ.
ಪಾಸಿಟಿವ್ ಬಂದ ಯುವಕ ಸೇರಿದಂತೆ, ಬೆಳಗಾವಿ, ಖಾನಾಪುರ ಮತ್ತು ಶಿವಮೊಗ್ಗ ಜಿಲ್ಲೆಯ ಜನರು ಕ್ವಾರಂಟೈನ್ ಮುಗಿಸಿ ನೆಗೆಟಿವ್ ವರದಿ ಬಂದ ಬಳಿಕ ಮಂಗಳೂರಿನಿಂದ ಖಾಸಗಿ ಕಾರಿನಲ್ಲಿ ಹೊರಟಿದ್ದಾರೆ. ಈ 3 ಮಂದಿಯಲ್ಲಿ ಇಬ್ಬರು ಹುಬ್ಬಳ್ಳಿ ಕಡೆಗೆ ಹಾಗೂ ಯಲ್ಲಾಪುರಕ್ಕೆ ಪಾಸಿಟಿವ್ ಬಂದ ಯುವಕ ಹೋಗಬೇಕಾಗಿತ್ತು ಎಂಬುದು ತಿಳಿದುಬಂದಿದೆ.
ಈ ನಡುವೆ ಯುವಕನ ಮೊಬೈಲ್ ಸಂಪರ್ಕಕ್ಕೆ ಬಾರದೆ ಕುಂದಾಪುರ ದಾಟಿದ ನಂತರ ಯುವಕನ ಮೊಬೈಲ್‍ಗೆ 'ನೀವು ಯಾವ ಪ್ರದೇಶದಲ್ಲಿದ್ದೀರೋ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ವರದಿ ಮಾಡಿಕೊಳ್ಳಿ' ಎಂದು ಮಂಗಳೂರು ಆಸ್ಪತ್ರೆಯಿಂದ ಯುವಕನಿಗೆ ಸಂದೇಶ ಬಂದಿದೆ. ಭಟ್ಕಳ ಸಮೀಪ ಬಂದಿದ್ದ ಯುವಕನಿಗೆ ವರದಿ ಪಾಸಿಟಿವ್ ಇರುವುದು ಖಚಿತಗೊಂಡ ಬಳಿಕ ಪಿಪಿಇ ಕಿಟ್ ತೊಡಿಸಿ ಯುವಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು.
ಯುವಕ ಯಲ್ಲಾಪುರದವನಾದರೂ ಹೆಂಡತಿಯ ಮನೆ ಭಟ್ಕಳದ ಮದೀನಾ ಕಾಲೋನಿಯಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಯುವಕನನ್ನು ಕಾರವಾರದ ಆರೋಗ್ಯ ಇಲಾಖೆ ತಂಡ ಬಂದು ಆ್ಯಂಬುಲೆನ್ಸ್ ಮೂಲಕ ಕಾರವಾರ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದೆ.
ಪ್ರಯಾಣ ಬೆಳೆಸಿ ಕೊನೆಗೂ ಸಿಕ್ಕ ಇನ್ನಿಬ್ಬರು: ಈ ಎಲ್ಲದರ ಮಧ್ಯೆ ಯಲ್ಲಾಪುರದ ಯುವಕನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಕಾರಿನಲ್ಲಿದ್ದ ಇನ್ನಿಬ್ಬರು ಯುವಕರು ತಮ್ಮ ಪ್ರಯಾಣವನ್ನು ಮುಂದುವರೆಸಿದ್ದರು. ಕೂಡಲೇ ಭಟ್ಕಳ ಪಿಎಸ್‍ಐ ಭರತ್ ಮತ್ತು ಸಿಬ್ಬಂದಿ ಕೂಡಾ ಆಸ್ಪತ್ರೆಗೆ ಧಾವಿಸಿದ್ದಾರೆ. ಯುವಕನ ಜೊತೆ ಕಾರಿನಲ್ಲಿ ಪ್ರಯಾಣಿಸಿದ ಇಬ್ಬರು ಸಹಚರರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಿ, ಕೊನೆಯಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾರೆ. ಸದ್ಯ ಆ ಇಬ್ಬರನ್ನೂ ಐಸೋಲೇಶನ್ ಗೆ ಒಳಪಡಿಸಿರುವ ಬಗ್ಗೆ ಪೊಲೀಸ್ ಮೂಲದಿಂದ ಮಾಹಿತಿ ಸಿಕ್ಕಿದೆ.