ಕಾರವಾರ: ಕಾಳಿ ನದಿ ಪ್ರವಾಹದಿಂದ ಸಾಕಷ್ಟು ಗ್ರಾಮಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುವ ಮುನ್ಸೂಚನೆ ಇದ್ದರೂ ಅಧಿಕಾರಿಗಳು ಒಮ್ಮೆಲೆ ಜಲಾಶಯಕ್ಕೆ ನೀರು ಬಿಟ್ಟಿದ್ದರಿಂದ ಪ್ರವಾಹ ಸಂಭವಿಸಿದೆ ಎಂದು ಜನರು ಆರೋಪಿಸಿದ್ದಾರೆ.
ಕಳೆದೆರಡು ದಿನದ ಹಿಂದೆ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಕದ್ರಾ ಸುತ್ತಮುತ್ತಲಿನ ಹಲವು ಗ್ರಾಮಗಳು ಮುಳುಗಡೆಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಅದರಲ್ಲೂ ಜಲಾಶಯದ ಸಮೀಪದ ಗಾಂಧಿನಗರ, ಕುರ್ನಿಪೇಟೆ, ಮಲ್ಲಾಪುರ ಗ್ರಾಮದಲ್ಲಿ 50ಕ್ಕೂ ಅಧಿಕ ಮನೆಗಳು ನೆಲಕ್ಕೆ ಬಿದ್ದಿದ್ದು, ನೂರಾರು ಮನೆಗಳು ಜಲಾವೃತವಾಗಿವೆ. ಈ ಹಾನಿಗೆ ಕೆಪಿಸಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ:
ಜಲಾಶಯದಿಂದ ನೀರು ಬಿಡುವ ಒಂದು ದಿನ ಮುಂಚೆ ಮುನ್ಸೂಚನೆ ಕೊಟ್ಟಿದ್ದರೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ. ಪದೇ ಪದೇ ಆಗುತ್ತಿರುವ ಪ್ರವಾಹ ಗ್ರಾಮದ ಜನರನ್ನು ಕಂಗೆಡುವಂತೆ ಮಾಡಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ.
ಜಲಾಶಯದಿಂದ ನೀರು ಬಿಟ್ಟಾಗಲೆಲ್ಲ ಇದೇ ಪರಿಸ್ಥಿತಿ:
ಕಳೆದ 2019ರಲ್ಲಿ ಕದ್ರಾ ಜಲಾಶಯದಿಂದ ಇದೇ ರೀತಿ ಹೆಚ್ಚಿನ ಪ್ರಮಾಣದ ನೀರು ಬಿಟ್ಟಾಗ ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆ ವೇಳೆ ಜಲಾಶಯದಿಂದ ಒಮ್ಮೆಲೆ ನೀರು ಬಿಟ್ಟ ವೇಳೆ ಹಾನಿಯಾಗುವ ಗ್ರಾಮದ ಜನರಿಗೆ ಬೇರೆ ಕಡೆ ಶಾಶ್ವತ ಪರಿಹಾರ ಒದಗಿಸಿಕೊಡುವ ಬಗ್ಗೆ ಜಿಲ್ಲಾಡಳಿತ ಆಶ್ವಾಸನೆ ನೀಡಿತ್ತು. ಆದರೂ ಆಶ್ವಾಸನೆ ಈಡೇರಿಸದ ಹಿನ್ನೆಲೆಯಲ್ಲಿ ಜನರು ತಾವು ನೆಲೆಸಿದ್ದ ಜಾಗದಲ್ಲೇ ವಾಪಾಸ್ ಬಂದು ನೆಲೆಸಿದ್ದರು. ಈ ಬಾರಿಯಾದರೂ ಬೇರೆಡೆಗೆ ಶಾಶ್ವತ ಪರಿಹಾರ ಕಲ್ಪಿಸಿ ಅನ್ನೋದು ಸ್ಥಳೀಯರು ಮನವಿ ಮಾಡಿದ್ದಾರೆ.
ತಹಶೀಲ್ದಾರ್ ಪ್ರತಿಕ್ರಿಯೆ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರವಾರ ತಹಶೀಲ್ದಾರ್ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಜಾಗದ ಹುಡುಕಾಟಕ್ಕೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಔಷಧಿ ತರಲು ಹೋಗಿ ವೃದ್ಧ ಸಾವು: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಮೃತದೇಹ ಪತ್ತೆ
ಗಂಗಾವಳಿ ಪ್ರವಾಹಕ್ಕೆ ಸಿಲುಕಿ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಶುಕ್ರವಾರ ಕಣ್ಮರೆಯಾಗಿದ್ದ ಇಬ್ಬರಲ್ಲಿ ಓರ್ವ ಯುವಕನ ಮೃತದೇಹ ಶನಿವಾರ ಸಂಜೆ, ಮತ್ತೋರ್ವ ಮಹಿಳೆಯ ಮೃತದೇಹ ಇಂದು ಪತ್ತೆಯಾಗಿದೆ.
ಜಲಾವೃತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಜನರನ್ನು ಸಾಗಿಸುತ್ತಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಓರ್ವ ಯುವಕ ಮತ್ತು ಮಹಿಳೆ ಕಣ್ಮರೆಯಾಗಿದ್ದರು. ನೆರೆ ಇಳಿದ ಬಳಿಕ ಮಣ್ಣಿನ ರಾಶಿಯಲ್ಲಿ ಸಿಲುಕಿಕೊಂಡು ಶನಿವಾರ ಯುವಕ ಗಂಗಾಧರ ಗೌಡ (34) ಶವವಾಗಿ ಪತ್ತೆಯಾಗಿದ್ದು, ಬೀರಾ ಗೌಡ (67) ಮೃತದೇಹ ಭಾನುವಾರ ಪತ್ತೆಯಾಗಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಚೆಕ್ಕನ್ನು ಅವರ ಕುಟುಂಬಸ್ಥರಿಗೆ ಶಾಸಕಿ ರೂಪಾಲಿ ನಾಯ್ಕ್ ನೀಡಿದ್ದಾರೆ.
ವೃದ್ಧ ಸಾವು:
ಔಷಧಿ ತರಲು ಜಲಾವೃತವಾದ ಮನೆಗೆ ತೆರಳಿದ್ದ ವೃದ್ಧನೋರ್ವ ಮೃತಪಟ್ಟ ಘಟನೆ ತಾಲೂಕಿನ ಸಿಂಗನಮಕ್ಕಿಯಲ್ಲಿ ನಡೆದಿದೆ. ನಾರಾಯಣ ಗೌಡ (82) ಮೃತಪಟ್ಟಾತ. ಈತ ತಾನು ಪ್ರತಿನಿತ್ಯ ಸೇವಿಸುವ ಮಾತ್ರೆ ಜಲಾವೃತವಾದ ಮನೆಯಲ್ಲಿಟ್ಟಿದ್ದರಿಂದ ಶುಕ್ರವಾರ ಸಂಜೆ ಹೊತ್ತಿಗೆ ತರಲು ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಸ್ಥಳೀಯರು ಆತನನ್ನು ನೋಡಿ ಮೇಲಕ್ಕೆ ತಂದಿದ್ದಾರೆ. ಈ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಜನರ ಮೇಲೆ ವರುಣನ ಮುನಿಸು; ನೆರೆಗೆ ನಲುಗಿದ ಜನತೆ