ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಲ್ಲಿದ್ದಲು ತುಂಬಿದ್ದ ಲಾರಿಯೊಂದು ಉರುಳಿ ಬಿದ್ದು ಕ್ಲೀನರ್ ಸಾವನ್ನಪ್ಪಿದ್ದು, ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಸಾಗರ-ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 69ರ ಗೇರುಸೊಪ್ಪಾ ಸುಳೆಮೂರ್ಕಿ ತಿರುವಿನಲ್ಲಿ ನಡೆದಿದೆ.
ಕಲ್ಲಿದ್ದಲು ತುಂಬಿಕೊಂಡು ಸಾಗರ ಮಾರ್ಗದಿಂದ ಹೊನ್ನಾವರದ ಕಡೆಗೆ ಚಾಲಕ ಅತಿ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿಕೊಂಡು ಬಂದ ಪರಿಣಾಮ ಗೆರುಸೊಪ್ಪಾದ ಸುಳೆಮೂರ್ಕಿ ಕ್ರಾಸ್ನಲ್ಲಿ ಪಲ್ಟಿಯಾಗಿದೆ.
ಈ ವೇಳೆ ಲಾರಿಯ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನೂ ಆಂಬುಲೆನ್ಸ್ ಮೂಲಕ ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಕ್ಲೀನರ್ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಮಾರುತಿ ಕೃಷ್ಣ ನಾಯ್ಕ (29) ಎಂದು ಗುರುತಿಸಲಾಗಿದೆ. ಇನ್ನು ಗಂಭೀರ ಗಾಯಗೊಂಡಿರುವ ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಅಶೋಕ್ ಪೀರು ನಾಯಕ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.