ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿನ ಪುರಸಭಾ ಘನತ್ಯಾಜ್ಯ ಘಟಕದಲ್ಲಿನ ಕಸ ಸಂಸ್ಕರಣೆಯ ನೀರನ್ನು ಹೊರ ಚೆಲ್ಲಿರುವುದನ್ನು ಖಂಡಿಸಿ ಮತ್ತೊಮ್ಮೆ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಒಂದು ವಾರದೊಳಗಾಗಿ ಕಸವನ್ನೆಲ್ಲ ಸಂಗ್ರಹಿಸಿ ಒಂದೇ ಕಡೆ ಹೊಂಡ ಮಾಡಿ ಮುಚ್ಚುವಂತೆ ಸೂಚಿಸಿದ್ದಾರೆ.
ಪುರಸಭಾ ಘನತ್ಯಾಜ್ಯ ಘಟಕದಲ್ಲಿನ ಕಸ ಸಂಸ್ಕರಣೆಯ ನೀರನ್ನು ಹೊರ ಚೆಲ್ಲಿದ್ದು, ಇದರಿಂದಾಗಿ ಕಲುಷಿತ ನೀರಿನ ತ್ಯಾಜ್ಯ ಘಟಕದ ಸುತ್ತಮುತ್ತಲಿನ ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮದ ಮನೆಗಳ ಬಾವಿ, ತೋಟಕ್ಕೆ ಸೇರಿತ್ತು. ಇದನ್ನು ಖಂಡಿಸಿ ಸೋಮವಾರ ಬೆಳಗ್ಗೆಯಿಂದಲೇ ಟೆಂಟ್ ಹಾಕಿ ಪುರಸಭೆ ಘನ ತ್ಯಾಜ್ಯವೂ ಘಟಕದ ಸುತ್ತಮುತ್ತಲಿನ ಗ್ರಾಮದ ನಿವಾಸಿಗರು, ಮತ್ತೆ ಪ್ರತಿಭಟನೆಗೆ ಕುಳಿತಿದ್ದರು. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಸುನೀಲ್ ನಾಯ್ಕ, ಸಹಾಯಕ ಆಯುಕ್ತರಾದ ಸಾಜಿದ್ ಅಹ್ಮದ್ ಮುಲ್ಲಾ, ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ ಹಾಗೂ ಪುರಸಭೆ ಮುಖ್ಯಾಧಿಕಾರಿ ದೇವರಾಜು ಪ್ರತಿಭಟನಾ ಸ್ಥಳಕ್ಕೆ ಬಂದು ಅವರ ಬೇಡಿಕೆ ಆಗ್ರಹವನ್ನು ಆಲಿಸಿದರು.
ಪ್ರತಿಭಟನಾಕಾರರ ಆಗ್ರಹ:
• ಪುರಸಭೆಗೆ ನಿಗದಿಯಾದ ಬೆಳಲಖಂಡ ಸ್ಥಳದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಡೆಸಲು ಎಸ್.ಇ.ಐ.ಎ.ಎ. ಅವರಿಂದ ಅನುಮತಿ ಪಡೆದುಕೊಂಡಿಲ್ಲವಾಗಿದ್ದು, ಇದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದ್ದರೂ ಸಹ ಈ ಜಾಗದಲ್ಲಿ ಘನತ್ಯಾಜ್ಯ ಘಟಕ ನಡೆಸಲು ನಮ್ಮೆಲ್ಲರ ವಿರೋಧವಿದೆ.
• ಪುರಸಭೆ ಘನ ತ್ಯಾಜ್ಯ ಘಟಕದಿಂದ ಕಲುಷಿತ ನೀರನ್ನು ಹೊರಬಿಟ್ಟ ಹಿನ್ನೆಲೆ ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮದ ಮನೆಗಳ ಬಾವಿ, ತೋಟಕ್ಕೆ ಕಲುಷಿತ ನೀರು ಸೇರಿದ್ದು ಜನರಿಗೆ ಕುಡಿಯುವ ನೀರು ವಿಷಯುಕ್ತವಾಗಿದೆ. ಇದರಿಂದ ಜನರು ಬದುಕಲು ಅಸಾಧ್ಯವಾಗದಂತಾಗಿದ್ದು, ವಯಸ್ಸಾದವರಿಂದ ಚಿಕ್ಕಮಕ್ಕಳ ತನಕ ಬದುಕುವುದಾದರು ಹೇಗೆ.?
• ಘನತ್ಯಾಜ್ಯ ಘಟಕ ಬೇರೆಡೆ ಸ್ಥಳಾಂತರಿಸಿ ಈ ಜಾಗದಲ್ಲಿ ವಾರದ ಸಂತೆ ನಡೆಸುವಂತೆ ಆಗ್ರಹಿಸಿದರು.
ನಂತರ ಜನರ ಪ್ರತಿಭಟನೆ ಆಗ್ರಹದ ಹಿನ್ನೆಲೆ ಖುದ್ದು ಶಾಸಕ ಸುನೀಲ್ ನಾಯ್ಕ ಹಾಗೂ ಅಧಿಕಾರಿಗಳ ವರ್ಗವೂ ಘನತ್ಯಾಜ್ಯ ಘಟಕದ ಒಳಗೆ ತೆರಳಿ ಅಲ್ಲಿನ ವಸ್ತುಸ್ಥಿತಿಯನ್ನು ಅವಲೋಕಿಸಿ ಪುರಸಭೆಯ ಅಧಿಕಾರಿಗಳಿಗೆ ಸಮರ್ಪಕ ಸೂಚನೆ ನೀಡಿದರು.