ಕಾರವಾರ: ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿ ತರಲು ತೆರಳಿದ್ದ ಕೂಲಿ ಕಾರ್ಮಿಕನೊಬ್ಬ ಮನೆಗೆ ಮರಳುವಾಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕುಮಟಾ ತಾಲೂಕಿನ ಹೊಲನಗದ್ದೆಯ ಹಣ್ಣೆಮಠದಲ್ಲಿ ನಡೆದಿದೆ.
ಹಣ್ಣೆಮಠದ ನಾರಾಯಣ ಪಟಗಾರ (55) ಮೃತ. ಆದರೆ ಈತನ ಸಾವಿನ ಬಗ್ಗೆ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು ತಡರಾತ್ರಿವರೆಗೂ ಮೃತದೇಹ ಎತ್ತಲು ಬಿಡದೆ ಸಾವಿಗೆ ಕಾರಣರಾದವರನ್ನು ಕರೆಸುವಂತೆ ಪಟ್ಟು ಹಿಡಿದಿದ್ದರು. ಕೊನೆಗೆ ಉಪವಿಭಾಗಾಧಿಕಾರಿ ಎಂ ಅಜಿತ್, ತಹಶಿಲ್ದಾರ್ ಮೇಘರಾಜು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದರು.
ಸ್ಥಳೀಯರು ಆರೋಪಿಸುವಂತೆ ಈತ ಊರಿನ ಕೆಲವರ ಜೊತೆ ಮಂಗಳವಾರ ಸಂಜೆ ಮನೆಗೆ ವಾಪಸ್ ಬರುತ್ತಿರುವಾಗ ಆರು ಪೊಲೀಸರು ಓಡಿಸಿಕೊಂಡು ಬಂದಿದ್ದರು. ಆಗ ಜತೆಯಿಲ್ಲಿದ್ದ ಇತರರು ಓಡಿದ್ದಾರೆ. ಹಿಂದೆ ಇದ್ದ ಈತ ಕೂಗಿಕೊಂಡಿದ್ದಾನೆ. ಆದರೆ ಆತ ವಾಪಸ್ ಊರಿಗೆ ಬರದೆ ಇದ್ದಾಗ ಮರಳಿ ಅದೆ ಮಾರ್ಗದಲ್ಲಿ ತೆರಳಿದಾಗ ಶವ ಪತ್ತೆಯಾಗಿದೆ.
ನಮಗೆ ಈ ಸಾವಿನ ಬಗ್ಗೆ ಅನುಮಾನವಿದ್ದು, ಕೂಡಲೇ ಆ ಪೊಲೀಸರು ಯಾರು ಎಂಬುದನ್ನು ಬಹಿರಂಗಗೊಳಿಸುವಂತೆ ಪಟ್ಟು ಹಿಡಿದಿದ್ದರು. ಕೊನೆಗೆ ಉಪವಿಭಾಗಾಧಿಕಾರಿ ಎಂ ಅಜಿತ್ ಗ್ರಾಮಸ್ಥರ ಮನವೊಲಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ವೇಳೆ ಎಲ್ಲವೂ ತಿಳಿಯಲಿದೆ. ಈ ವೇಳೆ ನೀವು ಆಸ್ಪತ್ರೆಗೆ ಬನ್ನಿ ಬಳಿಕ ಸಾವಿನ ಹಿಂದೆ ಯಾರಾದರು ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಶವ ಒಯ್ಯಲು ಅವಕಾಶ ನೀಡಲಾಗಿದೆ.