ಕಾರವಾರ(ಉತ್ತರ ಕನ್ನಡ): ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಸರ್ಕಾರ ಮಾಡುತ್ತದೆ ಎನ್ನುವ ಹೇಳಿಕೆಯನ್ನ ಜನಪ್ರತಿನಿಧಿಗಳು ನೀಡುತ್ತಲೇ ಇರುತ್ತಾರೆ. ಆದರೆ, ಇಂದಿಗೂ ರಸ್ತೆ ಸೌಕರ್ಯವೇ ಇಲ್ಲದ ಅದೆಷ್ಟೋ ಗ್ರಾಮದ ಜನರು ಪರದಾಟ ನಡೆಸುತ್ತಾ ಬಂದಿದ್ದಾರೆ. ಇಲ್ಲೊಂದು ಗ್ರಾಮದಲ್ಲಿ ರಸ್ತೆ ಇಲ್ಲದೆ ಶವವನ್ನು ಕಟ್ಟಿಗೆಗೆ ಕಟ್ಟಿಕೊಂಡು ಕಿ.ಮೀ ಗಟ್ಟಲೇ ಜನರೇ ಹೊತ್ತೊಯ್ದ ಘಟನೆ ಇಂದು ನಡೆದಿದೆ.
ಸರ್ಕಾರದ ವಿರುದ್ಧ ಕಿಡಿ: ಈ ಅಮಾನವೀಯ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆರಡೆ ಗ್ರಾಮದಲ್ಲಿ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ. ರಸ್ತೆ ಇಲ್ಲದೇ ಜನರು ಇಂದಿಗೂ ಗದ್ದೆ, ಕಾಡಿನ ಪ್ರದೇಶದಲ್ಲಿ ಓಡಾಟ ನಡೆಸುತ್ತಾರೆ. ಈ ನಡುವೆ ಗ್ರಾಮದ ದಾಮು ನಾಯ್ಕ ಎನ್ನುವ ವ್ಯಕ್ತಿ ಬೆಂಕಿ ಅವಘಡದಲ್ಲಿ ಮತಪಟ್ಟಿದ್ದನಂತೆ. ಇನ್ನು ಆತನ ಶವವನ್ನು ರಸ್ತೆ ಇಲ್ಲದ ಕಾರಣ ಜನರು ಕಟ್ಟಿಗೆಗೆ ಕಟ್ಟಿಕೊಂಡು ಆಸ್ಪತ್ರೆಗೆ ನಡೆದುಕೊಂಡು ಸಾಗಿಸಿದ್ದರು. ಇದಾದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮತ್ತೆ ಶವವನ್ನ ಕಟ್ಟಿಗೆಗೆ ಕಟ್ಟಿಕೊಂಡು ಸುಮಾರು 5 ಕಿ. ಮೀ ಹೆದ್ದಾರಿಯಿಂದ ಸಾಗಿದ್ದಾರೆ. ಈ ಅಮಾನವೀಯ ದೃಶ್ಯವನ್ನು ಗ್ರಾಮಸ್ಥರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ: ಗ್ರಾಮದಲ್ಲಿ 10 ಮನೆಗಳಿದ್ದರೂ ನೂರಾರು ಕುಟುಂಬಗಳ ಜಮೀನು ಇಲ್ಲಿದೆ. ನಿತ್ಯವು ಬಂದು ಹೋಗುತ್ತಾರೆ. ಆದರೆ, ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೆ ಒಳಗಾದರೆ, ಇಲ್ಲವೇ ಯಾವುದೇ ಆಪತ್ತು ಎದುರಾದರೆ ಜೋಳಿಗೆ ಕಟ್ಟಿ ಹೊರಬೇಕಾಗಿದೆ. ಗುಡ್ಡದ ದಾರಿಯಲ್ಲಿ ಓಡಾಡುವುದಕ್ಕೂ ಕಷ್ಟ. ನಮಗೆ ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟಲ್ಲಿ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರಾದ ಸಣ್ಣಪ್ಪ ನಾಯ್ಕ.
ಬಹುತೇಕರು ಬೇರೆ ಊರುಗಳಿಗೆ ಹೋಗಿ ನೆಲೆಸಿದ್ದಾರೆ: ಬೆರಡೆ ಗ್ರಾಮದ ಕದಂಬ ನೌಕಾನೆಲೆ ಭೂಮಿಗೆ ಹೊಂದಿಕೊಂಡಿದೆ. ಗ್ರಾಮದ ಸುಮಾರು ಶೇ.50ರಷ್ಟು ಜಮೀನನ್ನು ನೌಕಾದಳದವರು ವಶಪಡಿಸಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಸಾಗುವ ದಾರಿಯೂ ಈ ಹಿಂದೆಯೇ ನೌಕಾನೆಲೆಯ ವ್ಯಾಪ್ತಿಗೆ ಹೋಗಿದೆ. ಇದಾದ ನಂತರ ಗ್ರಾಮಕ್ಕೆ ರಸ್ತೆಯೇ ಇಲ್ಲ. ಸುಮಾರು 150 ಎಕರೆಗೂ ಅಧಿಕ ಭೂಮಿ ಇಂದಿಗೂ ರೈತರದ್ದೇ ಆಗಿದ್ದು, ಕೃಷಿ ಚಟುವಟಿಕೆಯನ್ನು ಮಾಡುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ರಸ್ತೆ ಇಲ್ಲದೇ ಬಹುತೇಕ ಎಲ್ಲರೂ ಬೇರೆ ಬೇರೆ ಊರುಗಳಿಗೆ ಹೋಗಿ ನೆಲೆಸಿದ್ದಾರೆ. ಪ್ರತಿ ದಿನ ಜಮೀನಿಗೆ ಕಿರಿದಾದ ಕಾಲುದಾರಿಯಲ್ಲಿಯೇ ಕಷ್ಟಪಟ್ಟು ರೈತರು ಓಡಾಟ ನಡೆಸಬೇಕು. ಹೊತ್ತಿನ ಊಟಕ್ಕೆ ಏನಾದರೂ ಬೇಕು ಎಂದರೂ ಕೂಡ ನಡೆದುಕೊಂಡೇ ದೂರಾದ ಐದಾರು ಕಿ.ಮೀ ಅಂಕೋಲಾಗೆ ತೆರಳಿ ತರಬೇಕು.
ಅಲ್ಲದೇ ಇಲ್ಲಿ ಹಳ್ಳ ಇರುವ ಕಾರಣ ಮಳೆಗಾಲದಲ್ಲಿ ಹಲವು ಮಂದಿ ಆಪತ್ತು ತಂದುಕೊಂಡ ಘಟನೆ ಕೂಡ ನಡೆದಿದೆ. ನೌಕಾನೆಲೆ ಜಾಗ ಪಕ್ಕದಲ್ಲಿಯೇ ಇರುವ ಕಾರಣ ಅವರು ಕೂಡ ಹೆದರಿಸುತ್ತಾರೆ. ರಸ್ತೆ ನಿರ್ಮಿಸಿಕೊಡುವಂತೆ ಹಲವು ಬಾರಿ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡರು ಯಾರು ಸ್ಪಂದಿಸುತ್ತಿಲ್ಲ. ಪ್ರತಿ ಬಾರಿ ಯಾರೇ ಮೃತಪಟ್ಟರು ಈ ದುಃಸ್ಥಿತಿ ಇದೆ. ಕೂಡಲೇ ನಮಗೆ ಕನಿಷ್ಠ ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟಲ್ಲಿ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಗ್ರಾಮಸ್ಥ ಡಾಕು ನಾಯ್ಕ.
ನಗರ ಸಮೀಪವೇ ಇದ್ದರೂ ಕುಗ್ರಾಮ: ಜಮೀನನ್ನು ನೌಕಾನೆಲೆಯವರೇ ಪೂರ್ಣ ತೆಗೆದುಕೊಳ್ಳಲಿ. ಇಲ್ಲವೇ ಇರುವ ಜಮೀನಿಗೆ ತೆರಳಿ ಕೃಷಿ ಮಾಡಲು, ಮನೆಗಳಿಗೆ ತೆರಳಲು ರಸ್ತೆಯನ್ನಾದರೂ ಸರ್ಕಾರ ನಿರ್ಮಿಸಿಕೊಡಲಿ. ಹೆದ್ದಾರಿ ಸಮೀಪದಲ್ಲೇ ಇರುವ ಗ್ರಾಮ ರಸ್ತೆ ಇಲ್ಲದೇ ಕುಗ್ರಾಮ ಆಗಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಇಂದಿಗೂ ಮೂಲ ಸೌಕರ್ಯವಾದ ರಸ್ತೆ ಇಲ್ಲದೇ ಶವವನ್ನು ಕಟ್ಟಿಗೆಗೆ ಕಟ್ಟಿಕೊಂಡು ಸಾಗಾಟ ಮಾಡಿದ್ದು ನಿಜಕ್ಕೂ ದುರಂತ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಗ್ರಾಮಕ್ಕೆ ರಸ್ತೆ ಸಂಪರ್ಕ ಮಾಡುವ ಕಾರ್ಯವನ್ನು ಮಾಡಬೇಕಿದೆ.
ಇದನ್ನೂ ಓದಿ: ಗೊಂದಲದ ಗೂಡಾದ ಹೆದ್ದಾರಿ ಸಂಚಾರ.. ದಾರಿ ಹೆಣವಾಗುತ್ತಿರುವ ಅಮಾಯಕ ಜನರು!