ಕಾರವಾರ: ವರ್ಷದ ಹಿಂದೆ ಕಡಲನಗರಿ ಕಾರವಾರದಲ್ಲಿ ದುರಂತವೊಂದು ನಡೆದುಹೋಗಿತ್ತು. ಸಮುದ್ರಮಧ್ಯದ ಕೂರ್ಮಗಡ ದ್ವೀಪ ಜಾತ್ರೆಗೆ ತೆರಳಿದ ದೋಣಿಯೊಂದು ಮಗುಚಿ ನೋಡ ನೋಡುತ್ತಿದ್ದಂತೆ 16 ಜನರು ನೀರುಪಾಲಾಗಿದ್ದರು. ಭದ್ರತಾ ಪರಿಕರ ಬಳಸದೇ ದೋಣಿ ಏರಿದ ಪರಿಣಾಮ ಭಾರಿ ದುರಂತ ನಡೆದಿತ್ತು. ಸದ್ಯ ಈ ಘಟನೆಯಿಂದ ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಪ್ರವಾಸೋದ್ಯಮ ಚಟುವಟಿಕೆ, ನೀರಮಧ್ಯದ ಜಾತ್ರೆ ಸೇರಿದಂತೆ ಇನ್ನಿತರ ಕಾರಣಗಳಿಗೆ ನೀರಿಗಿಳಿಯುವ ಪ್ರತಿಯೊಂದು ಬೋಟ್ ಮತ್ತು ದೋಣಿಗಳಿಗೆ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವನ್ನು ಕಡ್ಡಾಯಗೊಳಿಸಿದೆ.
ಪ್ರವಾಸಿಗರನ್ನು ಅಥವಾ ಸಾರ್ವಜನಿಕರನ್ನು ಕರೆದುಕೊಂಡು ಹೋಗುವ ಬೋಟ್‌ನಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಲೈಫ್ ಜಾಕೆಟ್ ಹಾಕಿಕೊಂಡು ಹೋಗಬೇಕೆನ್ನುವ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ ಬೋಟ್ ಹಾಗೂ ದೋಣಿಯ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಮೀನುಗಾರಿಕಾ ಇಲಾಖೆ ಹಾಗೂ ಬಂದರು ಇಲಾಖೆಯಿಂದ ಅನುಮತಿ ಪಡೆದ ದೋಣಿಗಳಲ್ಲಿ ಮಾತ್ರ ಪ್ರವಾಸಿಗರು ಸಂಚರಿಸಲು ಅನುಮತಿ ನೀಡಿದೆ.
ನಿಗದಿಗಿಂತ ಹೆಚ್ಚಿನ ಪ್ರವಾಸಿಗರನ್ನ ಪ್ರಯಾಣಿಕರನ್ನು ಸುರಕ್ಷತೆ ಇಲ್ಲದೇ ಕರೆದುಕೊಂಡು ಹೋದರೆ ಬೋಟ್ ಹಾಗೂ ದೋಣಿಯ ಪರವಾನಗಿ ರದ್ದು ಮಾಡಲು ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಒಂದೊಮ್ಮೆ ನಿರ್ಲಕ್ಷ್ಯದಿಂದ ದುರಂತ ನಡೆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.