ಶಿರಸಿ (ಉತ್ತರ ಕನ್ನಡ): ಕೆಡಿಸಿಸಿ ಬ್ಯಾಂಕ್ ನ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಬುಧವಾರ ಐವರು ನಾಮಪತ್ರ ಹಿಂತೆಗೆದುಕೊಂಡಿದ್ದು, ಒಟ್ಟು 6 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದೆ. ಇನ್ನುಳಿದ 10 ಕ್ಷೇತ್ರಗಳಿಗೆ ಮಾತ್ರ ನವೆಂಬರ್ 11 ರಂದು ಚುನಾವಣೆ ನಡೆಯಲಿದೆ.
ತಾಲೂಕು ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ.ಎಂ. ಹೆಗಡೆ ಮುಳಖಂಡ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಆ ಮೂಲಕ ಸಿದ್ದಾಪುರದ ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಅವಿರೋಧ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಎಂ.ಎಸ್. ಹೆಗಡೆ ಇಟಗುಳಿ, ಎನ್.ಎಸ್. ಹೆಗಡೆ ಕೋಟಿಕೊಪ್ಪ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸುರೇಶ ಪೆಡ್ನೇಕರ್ ನಾಮಪತ್ರ ಹಿಂತೆಗೆದುಕೊಂಡಿದ್ದು, ನಿಕಟಪೂರ್ವ ನಿರ್ದೇಶಕ ಪ್ರಕಾಶ ಗುನಗಿ ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಅರ್ಬನ್ ಬ್ಯಾಂಕು ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮುಂಡಗೋಡಿನ ಶ್ರೀಧರ ಡೋರಿ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಈವರೆಗೆ ಒಟ್ಟು 16 ಕ್ಷೇತ್ರಗಳಲ್ಲಿ ಹಳಿಯಾಳದಿಂದ ಎಸ್.ಎಲ್. ಘೋಟ್ನೇಕರ್, ಜೋಯಿಡಾದಿಂದ ಕೃಷ್ಣ ದೇಸಾಯಿ, ಭಟ್ಕಳದಿಂದ ಮಂಕಾಳು ವೈದ್ಯ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್, ಕಾರವಾರದಿಂದ ಪ್ರಕಾಶ ಗುನಗಿ ಹಾಗೂ ತಾಲೂಕು ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಆರ್.ಎಂ. ಹೆಗಡೆ ಬಾಳೇಸರ ಸೇರಿ ಒಟ್ಟೂ 6 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾದಂತಾಗಿದೆ. ಇನ್ನುಳಿದಂತೆ 10 ಕ್ಷೇತ್ರಗಳಿಗೆ ನ.11 ರಂದು ಚುನಾವಣೆ ನಡೆಯಲಿದೆ.