ಕಾರವಾರ: ಮಹಾಮಾರಿ ಕೊರೊನಾದಿಂದಾಗಿ ಅದೆಷ್ಟೋ ಮಂದಿ ಇದ್ದ ಕೆಲಸವನ್ನು ಕಳೆದುಕೊಂಡು ನಿರುದ್ಯೋಗಿಗಳಾದರೆ, ಇನ್ನು ಕೆಲವರು ಕೆಲಸ ಮಾಡಿಯೂ ಸಂಬಳ ಸಿಗದೆ ಪರದಾಡುತ್ತಿದ್ದಾರೆ. ಇಂತಹದೇ ಸ್ಥಿತಿ ಇದೀಗ ಉತ್ತರ ಕನ್ನಡ ಜಿಲ್ಲೆಯ ಐಟಿಐ ಕಾಲೇಜಿನ ಅತಿಥಿ ಉಪನ್ಯಾಸಕರದ್ದಾಗಿದ್ದು, ಕಳೆದ 6 ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿನ ಸುಮಾರು 60ಕ್ಕೂ ಹೆಚ್ಚು ಐಟಿಐ ತರಬೇತುದಾರರು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅತಿಥಿ ಉಪನ್ಯಾಸಕರಿಗೆ 400 ರೂ. ಗೌರವಧನ ನೀಡುತ್ತಿದ್ದರು. ಅದರಂತೆ ಲಾಕ್ಡೌನ್ ತೆರವುಗೊಂಡ ಬಳಿಕ ಕಾಲೇಜುಗಳಿಗೆ ತೆರಳಿ ಲೈವ್ ಕ್ಲಾಸ್ ನಡೆಲಾಗುತ್ತಿದೆ. ಆದರೆ ಕಳೆದ ಆರು ತಿಂಗಳಿಂದ ಸಂಬಳವಾಗಿಲ್ಲವಂತೆ. ಇಷ್ಟಾದರೂ ಮಕ್ಕಳಿಗೆ ಪಾಠ ಮುಂದುವರಿಸುತ್ತಿದ್ದಾರೆ ಅತಿಥಿ ಉಪನ್ಯಾಸಕರು.
ಈ ಬಗ್ಗೆ ಜಿಲ್ಲಾಡಳಿತ, ಶಾಸಕರು, ಸಚಿವರ ಬಳಿ ಗೌರವಧನಕ್ಕಾಗಿ ಮನವಿ ಸಲ್ಲಿಸಿದರೂ ಆಶ್ವಾಸನೆ ಹೊರತುಪಡಿಸಿ ವೇತನ ಮಾತ್ರ ದೊರೆತಿಲ್ಲ. ಸುಮಾರು 6 ತಿಂಗಳಿಂದ ಇವರಿಗೆ ವೇತನ ದೊರೆಯದ ಕಾರಣ ಆರ್ಥಿಕವಾಗಿ ಬಹಳಷ್ಟು ಕುಗ್ಗಿದ್ದು, ಸಾಲ ಮಾಡಿಕೊಂಡು ಜೀವನ ನಡೆಸುವ ಸ್ಥಿತಿಗೆ ತಲುಪಿದ್ದಾರೆ. ಕರ್ನಾಟಕ ರಾಜ್ಯದಾದ್ಯಂತ ಸುಮಾರು 900 ಅತಿಥಿ ತರಬೇತುದಾರರು ಕೆಲಸ ಮಾಡುತ್ತಿದ್ದಾರೆ. ಈವರೆಗೆ ಯಾರಿಗೂ ವೇತನ ದೊರೆಯದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂಬುದು ಅತಿಥಿ ಉಪನ್ಯಾಸಕರ ಅಳಲಾಗಿದೆ.
ಸಂಬಳ ಸಿಗದಿದ್ದರು ವಿದ್ಯಾರ್ಥಿಗಳಿಗೆ ನಿರಂತರ ಆನ್ಲೈನ್ ಪಾಠ ಮುಂದುವರೆಸಲಾಗಿದೆ. ಸರ್ಕಾರ ಇತರೆ ಇಲಾಖೆಗಳಿಗೆ ವೇತನ ಪೂರೈಸಿದರೂ ಐಟಿಐ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ವೇತನ ಒದಗಿಸದೆ ತಾರತಮ್ಯ ನಡೆಸುತ್ತಿದೆ. ಎಲ್ಲಿಂದಲೋ ಬಂದು ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವವರಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೂಡಲೇ ಹಣ ಮಂಜೂರು ಮಾಡಿ ಗೌರವಧನ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಐಟಿಐ ತರಬೇತುದಾರರು ಒತ್ತಾಯಿಸಿದ್ದಾರೆ.