ವಾಸ್ಕೋ/ಕಾರವಾರ: ದೇವರ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ಕಾರೊಂದು ಭೀಕರ ಅಪಘಾತಗೊಂಡು ಕಾರವಾರ ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಈ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಗೋವಾದ ವಾಸ್ಕೋದಲ್ಲಿ ಸಂಭವಿಸಿದೆ.
ಮೃತರು ಕಾರವಾರ ತಾಲೂಕಿನ ಮಾಜಾಳಿ ಮೂಲದವರಾಗಿದ್ದು, ಉಲ್ಲಾಸ್ ನಾಗೇಕರ್ ಕುಟುಂಬ ಸದ್ಯ ವಾಸ್ಕೋ ನಿವಾಸಿಗಳಾಗಿದ್ದಾರೆ. ಉಲ್ಲಾಸ್ ಸೇರಿದಂತೆ ಅವರ ಕುಟುಂಬದ ಒಟ್ಟು ಎಂಟು ಸದಸ್ಯರು ಕಾರಿನಲ್ಲಿ ವಾಸ್ಕೋದಿಂದ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿ ದರ್ಶನ ಪಡೆದು ಬಳಿಕ ವಾಸ್ಕೋಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಗೋವಾದ ಕಾಣಕೋಣದ ಮನೋಹರ್ ಪರಿಕ್ಕರ್ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ನಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಮಡ್ಗಾಂವ್ನಿಂದ ಅತಿವೇಗದಲ್ಲಿ ಬಂದ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಬಲ ಭಾಗದಲ್ಲಿ ಬರುತ್ತಿದ್ದ ಉಲ್ಲಾಸ್ ಅವರ ಕುಟುಂಬವಿದ್ದ ಕಾರಿಗೆ ಎದುರಿನಿಂದ ಗುದ್ದಿದೆ. ಅಷ್ಟೇ ಅಲ್ಲದೇ, ಅಲ್ಲೇ ಚಲಿಸುತ್ತಿದ್ದ ಸ್ಕೂಟರ್ವೊಂದಕ್ಕೂ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದಲ್ಲಿ ಉಲ್ಲಾಸ ನಾಗೇಕರ್, ಅವರ ಪತ್ನಿ ವೀಣಾ ನಾಗೇಕರ್ ಹಾಗೂ ಅವರ ಪುತ್ರ ಹರೀಶ್ ನಾಗೇಕರ್ ಮೃತಪಟ್ಟಿದ್ದು, ಉಳಿದ ಕುಟುಂಬ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಮತ್ತು ಸ್ಕೂಟರ್ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಓದಿ: ಮೊಬೈಲ್ ನೋಡ್ತಾ ನೋಡ್ತಾ ನರ್ಸ್ ಮೇಲೆ ಟ್ಯಾಂಕರ್ ಹತ್ತಿಸಿದ ಚಾಲಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!