ಕಾರವಾರ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿದೆ. ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಮೊಬೈಲ್ ಅನ್ನು ಕಾಲಹರಣ ಮಾಡೋದಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಬಾಲಕ ಲಾಕ್‌ಡೌನ್ ಅವಧಿಯಲ್ಲಿ ಬೇಸರ ಕಳೆಯಲು ಮೊಬೈಲ್ ತೆಗೆದುಕೊಂಡಿದ್ದು ಇದೀಗ ಆತನ ಸಾಧನೆಗೆ ಮೆಟ್ಟಿಲಾಗಿ ನಿಂತಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ಮೂಲದ ಪುರಸ್ಸರ್ ದೇವಾನಂದ ಗಾಂವ್ಕರ್ ಎಂಬ ಬಾಲಕ ದೇಶದ ಪ್ರತಿಷ್ಠಿತ ಅನ್ ಅಕಾಡೆಮಿ ಎಮರ್ಜ್ ಟೀಚಿಂಗ್ ಸಂಸ್ಥೆ ಬುದ್ಧಿಮತ್ತೆ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾನೆ. ಇದನ್ನು ಮೆಚ್ಚಿ ಸಂಸ್ಥೆ ಈತನ ಸಾಧನೆಯನ್ನು ಗುರುತಿಸಿ ದೇಶದಲ್ಲಿಯೇ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಿ ಪುರಸ್ಕರಿಸಿದೆ.
9ನೇ ತರಗತಿ ವಿದ್ಯಾರ್ಥಿಯಾಗಿರುವ ಪುರಸ್ಸರ್, ಲಾಕ್‌ಡೌನ್ ಸಂದರ್ಭದಲ್ಲಿ ಬೇಸರ ಕಳೆಯಲು ಕೆಲಹೊತ್ತು ತಾಯಿಯ ಮೊಬೈಲ್ ಪಡೆದುಕೊಂಡು ವೀಡಿಯೋಗಳನ್ನು ನೋಡುತ್ತಿದ್ದನು. ಒಮ್ಮೆ ಈತ ಮೊಬೈಲ್‌ನಲ್ಲಿ ನೋಡುತ್ತಿದ್ದ ವೇಳೆ ಅನ್ಅಕಾಡೆಮಿಯ ಬುದ್ದಿಮತ್ತೆ ಪರೀಕ್ಷೆಯ ಜಾಹೀರಾತೊಂದು ಕಾಣಿಸಿತ್ತು. ಅದನ್ನು ಕ್ಲಿಕ್ ಮಾಡಿದ್ದ.
ಬಳಿಕ ಕುತೂಹಲಕ್ಕೆ ಆ ಪರೀಕ್ಷೆ ಬರೆಯುವ ಮನಸ್ಸು ಮಾಡಿದ್ದು, ಒಂದು ತಾಸಿನ ಎಮರ್ಜ್ ಪರೀಕ್ಷೆಯಲ್ಲಿ ಬಾಲಕ ನೂರಕ್ಕೂ ಅಧಿಕ ಪ್ರಶ್ನೆಗಳಿಗೆ ಕೇವಲ 13 ನಿಮಿಷಗಳಲ್ಲಿ ಸರಿಯಾಗಿ ಉತ್ತರ ನೀಡಿದ್ದನು. ದೇಶದಲ್ಲಿ ಸುಮಾರು 76 ಸಾವಿರ ಮಕ್ಕಳು ಪರೀಕ್ಷೆ ಬರೆದಿದ್ದು, ನೂರಕ್ಕೂ ಅಧಿಕ ಮಂದಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆದರೆ, ಈ ಬಾಲಕ ಕಡಿಮೆ ಅವಧಿಯಲ್ಲಿ ಸರಿಯಾದ ಉತ್ತರ ನೀಡಿದ್ದಕ್ಕಾಗಿ ಸಂಸ್ಥೆ ಪುರಸ್ಸರ್‌ನಿಗೆ ಪ್ರಥಮ ಬಹುಮಾನ ನೀಡಿದೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಪುರಸ್ಸರ್‌ನಿಗೆ ಖ್ಯಾತ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹಿ ಇರುವ ಪಾರಿತೋಷಕ, ಆ್ಯಪಲ್ ಕಂಪನಿ ಮ್ಯಾಕ್ಬುಕ್, ಬ್ಯಾಗ್, ಪೆನ್ಡ್ರೈವ್ ಸೇರಿ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವ ವಸ್ತುಗಳನ್ನು ಅಕಾಡೆಮಿ ನೀಡಿದೆ.
ಈ ಸಂಸ್ಥೆ 6 ರಿಂದ 12ನೇ ತರಗತಿವರೆಗಿನ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆ ಬಗ್ಗೆ ನಮ್ಮ ರಾಜ್ಯದ ಮಕ್ಕಳಿಗೆ ಮಾಹಿತಿ ಕೊರತೆ ಇದ್ದು, ಈ ರೀತಿ ಪರೀಕ್ಷೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಕಡಿಮೆ ಅವಧಿಯಲ್ಲಿ ಮಗನ ಸಾಧನೆಗೆ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಆತನ ಬುದ್ಧಿಮತ್ತೆ ಕಂಡು ಹೆಮ್ಮೆ ಪಡುತ್ತಿದ್ದಾರೆ. ಅಲ್ಲದೆ ಪುರಸ್ಸರ್ ಪ್ರಥಮ ಸ್ಥಾನ ಗಳಿಸಿದ್ದರಿಂದ ಲಕ್ಷಾಂತರ ವೆಚ್ಚದ ಸಿಲೆಬಸ್ ಕೋರ್ಸ್, ಐಕಾನಿಕ್ ಸಾಫ್ಟ್ವೇರ್ ಕೋಡಿಂಗ್ ಸೇರಿ ಹಲವು ಶಿಕ್ಷಣಕ್ಕೆ ಅನುಕೂಲವಾಗುವ ಕ್ಲಾಸ್‌ಗಳು ಉಚಿತವಾಗಿ ಸಿಕ್ಕಿದೆ.
ಇದನ್ನೂ ಓದಿ: ಗಂಗಾವತಿ : ಕಾಂಗ್ರೆಸ್ ಮುಖಂಡನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಯತ್ನಿಸಿದ ಬಿಜೆಪಿ ಲೀಡರ್