ಯಲ್ಲಾಪುರ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇದೀಗ ಬಹಿರಂಗಗೊಳ್ಳುತ್ತಿದ್ದು, ಉತ್ತರ ಕನ್ನಡದ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಭರ್ಜರಿ ಗೆಲುವು ದಾಖಲು ಮಾಡಿದೆ. ಬೈ ಎಲೆಕ್ಷನ್ನಲ್ಲಿ ಬಿಜೆಪಿಗೆ ಸಿಕ್ಕಿರುವ ಮೊದಲ ಗೆಲುವು ಇದಾಗಿದೆ.
ಸಮ್ಮಿಶ್ರ ಸರ್ಕಾರದ ವೇಳೆ ಕಾಂಗ್ರೆಸ್‌ನಿಂದ ಹೊರಬಂದು ಅನರ್ಹ ಶಾಸಕ ಎಂಬ ಹಣೆಪಟ್ಟ ಕಟ್ಟಿಕೊಂಡಿದ್ದ ಶಿವರಾಂ ಹೆಬ್ಬಾರ್, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೀಗ ಅವರು ಬರೋಬ್ಬರಿ 27 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಭೀಮಣ್ಣ ನಾಯ್ಕ್ ಹಾಗೂ ಜೆಡಿಎಸ್ನಿಂದ ಚೈತ್ರಾ ಗೌಡ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 66,290 ಮತಗಳನ್ನು ಪಡೆದು ಕೇವಲ 1,483 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜತೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಂ ಹೆಬ್ಬಾರ್ ಅವರ ಎದುರು ಅಲ್ಪಮತಗಳ ಅಂತರದಿಂದ ಶಿವನಗೌಡ ಪಾಟೀಲ್ ಸೋಲು ಕಂಡಿದ್ದರು. ಆದರೆ ಈ ಸಲ ಹೆಬ್ಬಾರ್ ಅವರಿಗೆ ಬೆಂಬಲ ನೀಡಿದ್ದರು. ಡಿ. 5ರಂದು ನಡೆದ ಮತದಾನದಲ್ಲಿ ಇಲ್ಲಿ ಶೇ 77ರಷ್ಟು ಮತದಾನ ನಡೆದಿತ್ತು.