ಕಾರವಾರ: ಕಾಳಿ ನದಿಯ ನೀರನ್ನು ಮಾಲಿನ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಮಾತನಾಡಿದ ಡಿಸಿ, ಮಾನ್ಯ ನ್ಯಾಯಾಲಯದ ಆದೇಶದಂತೆ ಈಗಾಗಲೇ ಜಿಲ್ಲಾ ಮಟ್ಟದ ವಿಶೇಷ ಪರಿಸರ ಕಣ್ಗಾವಲು ಕಾರ್ಯಪಡೆ (District Level Special Environment Surveillance Task Force) ರಚನೆಗೊಂಡಿದ್ದು, ಈ ಕಮಿಟಿಯು ಕಾಳಿ ನದಿಯ 10 ಕಿ.ಮೀ. ಸ್ಟ್ರೆಚ್ ಮಾಲಿನ್ಯ ಮುಕ್ತ ಮಾಡಲು ಶ್ರಮಿಸಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಿಯಾ ಯೋಜನೆಯಂತೆ ಕಾಳಿ ನದಿಯ (ದಾಂಡೇಲಿಯಿಂದ ಬೊಮ್ಮನಹಳ್ಳಿ ಹಳ್ಳಿಯವರೆಗೆ) ನೀರನ್ನು ಮಾಲಿನ್ಯ ಮುಕ್ತವಾಗಿಸಬೇಕು ಎಂದು ತಿಳಿಸಿದರು.
ಯೋಜನೆ ಕೇವಲ 10 ಕಿ.ಮೀ ವ್ಯಾಪ್ತಿಗೆ ಒಳಪಡದೆ ಇಡೀ ನದಿ ಉಗಮಸ್ಥಾನದಿಂದ ಸಮುದ್ರ ಸೇರುವವರೆಗೂ ಮಾಲಿನ್ಯ ಮುಕ್ತವಾಗಬೇಕಿದೆ. ಉಗಮ ಸ್ಥಾನದಲ್ಲಿರುವ ನೀರಿನ ಗುಣಮಟ್ಟ ಸಮುದ್ರ ಸೇರುವ ಸ್ಥಳದಲ್ಲಿಯೂ ಹಾಗೆಯೇ(ಮಾಲಿನ್ಯ ಮುಕ್ತ) ಇರಬೇಕಿದ್ದು, ಇದಕ್ಕೆ ಸಂಬಂಧಿಸಿದ ಇಲಾಖೆಗಳು ಈ ಕುರಿತು ಸೂಕ್ತ ಕ್ರಮ ವಹಿಸಬೇಕಿದೆ ಎಂದು ಹೇಳಿದರು.
ನದಿ ಪಾತ್ರದಲ್ಲಿ ಮಾಲಿನ್ಯ ಕಾರಕಗಳು ನೀರನ್ನು ಸೇರುವುದನ್ನು ಗುರುತಿಸಿ ಅದನ್ನು ನಿಲ್ಲಿಸಬೇಕು. ಹಾಗೂ ಈ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳು ನದಿಗೆ ಯಾವುದೇ ಮಲೀನ ನೀರು ಅಥವಾ ಕಸ ಕಡ್ಡಿಗಳು (ಘನ ತ್ಯಾಜ್ಯ) ಯಾವುದೇ ಮೂಲದಿಂದ ನದಿಗೆ ಸೇರುವಂತಹ ಪ್ರದೇಶಗಳನ್ನು ಗುರುತಿಸಿ, ನಕ್ಷೆಯನ್ನು ತಯಾರಿಸಿ ಇದನ್ನು ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ನದಿಯನ್ನು ಮಲೀನಗೊಳಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು. ಮುಂದಿನ ಎರಡು ವರ್ಷದೊಳಗೆ ಸಂಪೂರ್ಣ ಕಾಳಿ ನದಿ ಮಾಲಿನ್ಯ ಮುಕ್ತವಾಗುವ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಲು ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದರು.