ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಜಲಾಶಯಗಳಿಗೆ ಯಥೇಚ್ಚವಾಗಿ ನೀರು ಹರಿದು ಬರುತ್ತಿದೆ. ಕೊಡಸಳ್ಳಿ ಹಾಗೂ ಕದ್ರಾ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಅದರಲ್ಲಿಯೂ ಘಟ್ಟದ ಮೇಲ್ಬಾಗದ ತಾಲ್ಲೂಕುಗಳಲ್ಲಿ ನಿರಂತವಾಗಿ ಮಳೆಯಾಗುತ್ತಿದ್ದು, ಕಾಳಿ ನದಿಗೆ ಯಲ್ಲಾಪುರದ ಕೊಡಸಳ್ಳಿ ಬಳಿ ಹಾಗೂ ಕದ್ರಾದಲ್ಲಿ ನಿರ್ಮಿಸಲಾದ ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಈ ಕಾರಣದಿಂದ ನಿನ್ನೆ ಕದ್ರಾದಿಂದ 26 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಆದರೆ ಇಂದು ಕೂಡ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದ ಕೆಳಭಾಗದಲ್ಲಿ ಪ್ರವಾಹ ಉಂಟಾಗದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಹಂತ ಹಂತವಾಗಿ ಜಲಾಶಯಗಳಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ.
34.50 ಮೀಟರ್ ಸಾಮರ್ಥ್ಯದ ಕದ್ರಾ ಜಲಾಶಯದಲ್ಲಿ 15,212 ಕ್ಯೂಸೆಕ್ ಒಳಹರಿವು ಇದ್ದು 31.32 ಮೀಟರ್ ಭರ್ತಿಯಾಗಿತ್ತು. ಅಲ್ಲದೆ ಕೊಡಸಳ್ಳಿ ಜಲಾಶಯದಲ್ಲಿಯೂ ಕೂಡ ನೀರು ಭರ್ತಿಯಾದ ಕಾರಣ ಕದ್ರಾದಲ್ಲಿ ಆರು ಗೇಟ್‌ಗಳ ಮೂಲಕ ಒಟ್ಟು 18,155 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ಇನ್ನು ಗರಿಷ್ಠ 75.50 ಮೀಟರ್ ಸಾಮರ್ಥ್ಯದ ಕೊಡಸಳ್ಳಿ ಜಲಾಶಯದಲ್ಲಿ 7,455 ಕ್ಯೂಸೆಕ್ ಒಳಹರಿವು ಇದ್ದು ಸದ್ಯ 71.55 ಮೀಟರ್ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 7,970 ಕ್ಯೂಸೆಕ್ ನೀರನ್ನು ಕದ್ರಾ ಜಲಾಶಯಕ್ಕೆ ಹರಿಬಿಡಲಾಗಿದೆ. ಇನ್ನು ನೀರು ಹೊರಬಿಡುವ ಹಿನ್ನೆಲೆಯಲ್ಲಿ ಜಲಾಶಯ ವ್ಯಾಪ್ತಿಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಿರುವ ಕೆಪಿಸಿಎಲ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ವಿಶ್ವ ಯೋಗ ದಿನ: ಸಾಮಾಜಿಕ ಮಾಧ್ಯಮವೇ ವೇದಿಕೆ; ಈ ವೆಬ್ಸೈಟ್ ಮೂಲಕ ನೀವೂ ಭಾಗಿಯಾಗಿ..