ಕಾರವಾರ : ಪರಿಸರದ ಬಗೆಗೆ ಅಪಾರ ಕಾಳಜಿ ಹೊಂದಿರುವ ತಮ್ಮ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ನಿರಂತ ಹೋರಾಟ ನಡೆಸುತ್ತಿರುವ, ಜಾನಪದ ಭಂಡಾರ ಜೋಯಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪಾ ಅವರಿಗೆ ಪರಿಸರ ವಿಭಾಗದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸುಮಾರು 92 ವರ್ಷದ ಮಹಾದೇವ ವೇಳಿಪಾ ಕುಣಬಿ ಸಮುದಾಯದವರು. ಕಾಡಂಚಿನಲ್ಲಿಯೇ ಜೀವನ ಕಟ್ಟಿಕೊಂಡಿರುವ ಅವರು ಪರಿಸರ ಹೋರಾಟದಲ್ಲಿ ಮುಂಚುಣಿಯಲ್ಲಿದ್ದಂತವರು.
ಅರಣ್ಯ ಇಲಾಖೆಯಿಂದ ಈ ಹಿಂದೆ ಬೇಣಗಳಲ್ಲಿ ಅಕೇಶಿಯವನ್ನು ನೆಡಲು ಬಂದಂತಹ ಸಂದರ್ಭದಲ್ಲಿ ಅದನ್ನು ತಡೆದು ಕಾಡು ಜಾತಿಯ ಗಿಡಗಳನ್ನು ನೆಡಿಸಿದವರು.
ಮಾತ್ರವಲ್ಲದೆ ಕಾಡಿನ ಗಿಡಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ಇವರು ಔಷಧಿ ಗಿಡಗಳನ್ನು ತಂದು ಮನೆಯಲ್ಲಿಯೇ ಮೆನ ಮದ್ದನ್ನು ತಯಾರಿಸಿ ಅನಾರೋಗ್ಯ ಪೀಡಿತರಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಡಿಗ್ಗಿ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಹೋರಾಟ ಮಾಡಿದ್ದರು. ಮತ್ತು ಕಾಲ ಮಾನಕ್ಕೆ ತಕ್ಕಂತೆ ಲೆಕ್ಕವಿಲ್ಲದಷ್ಟು ಜಾನಪದ ಹಾಡುಗಳನ್ನು ಹಾಡುವ ಕಲೆ ಕರಗತವಾಗಿದೆ. ಇದೇ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಜಾನಪದ ಪ್ರಶಸ್ತಿ ಲಭಿಸಿತ್ತು.
ಕುಣಬಿ ಸಾಂಪ್ರದಾಯಿಕ ಕುಣಿತ, ಕಾಡು, ಪ್ರಾಣಿ ಮತ್ತು ಪ್ರಕೃತಿಗೆ ಸಂಬಂಧಿಸಿದ ಅನೇಕ ಕಥೆಗಳು, ತುಳಸಿ ಪದ, ರಾಮಾಯಯಣ ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಹಾಡುಗಳನ್ನು ಇವರು ಹಾಡಬಲ್ಲವರಾಗಿದ್ದಾರೆ.
ಜಿಲ್ಲೆಯಲಿ ನಡೆಯುವ ಎಲ್ಲಾ ಉತ್ಸವಗಳಲ್ಲಿ ಅತಿಥಿಗಳಾಗಿ ಭಾಗವಹಿಸುವ ಇವರು, ಜೊಯಿಡಾ ಕುಣಬಿ ಸಮಾಜದ ಮಾಜಿ ಅಧ್ಯಕ್ಷರಾಗಿದ್ದಾರೆ. ನಾಗೋಡಾ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದೀಗ ಮಾದೇವ ವೇಳಿಪಾ ಅವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಇದು ಜೊಯಿಡಾ ತಾಲೂಕಿಗೆ ಮತ್ತು ಕುಣಬಿ ಸಮಾಜಕ್ಕೆ ಸಂದ ಗೌರವವಾಗಿದೆ.