ಕಾರವಾರ: ಮುಂಬರುವ ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿ ಇರುವಾಗಲೇ ರಾಜಕೀಯ ಮುಖಂಡರು ಸ್ಪರ್ಧೆ ಬಗ್ಗೆ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಬರಡಾಗಿದ್ದ ಜೆಡಿಎಸ್ ಪಾಲಿಗೆ ಓಯಸಿಸ್ ಸಿಕ್ಕಂತಾಗಿದೆ. ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಜೆಡಿಎಸ್ ನಾಯಕರು ಇದೀಗ ಲೋಕಸಭೆ ಚುನಾವಣೆಗೆ ತಾವೂ ಕೂಡ ಆಕಾಂಕ್ಷಿಗಳೆಂದು ಹೇಳಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಉತ್ತರಕನ್ನಡ ಜಿಲ್ಲೆಯಲ್ಲಿ ಸತ್ವ ಕಳೆದುಕೊಂಡಿದ್ದ ಜೆಡಿಎಸ್‌ಗೆ ಮತ್ತೆ ಜೀವಕಳೆ ತುಂಬಿದಂತಾಗಿದೆ. ಈ ಮೈತ್ರಿ ಹಾಗೂ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸ್ಪರ್ಧಿಸಲ್ಲ ಎಂಬ ಊಹಾಪೋಹಗಳು ಜಿಲ್ಲೆಯ ಲೋಕಸಭೆ ಟಿಕೆಟ್ ಮೇಲೆ ಎಲ್ಲರ ಕಣ್ಣು ಬೀಳುವಂತೆ ಮಾಡಿದೆ.
ಲೋಕಸಭೆ ಚುನಾವಣೆ ಸ್ಪರ್ಧೆ ಸಂಬಂಧ ಅನಂತಕುಮಾರ್ ಹೆಗಡೆ ಅವರ ಬಾಯಿಯಿಂದಲೇ ಸ್ಪಷ್ಟತೆ ಹೊರ ಬರಲು ಕಾಯುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ. ಜಿಲ್ಲೆಯಲ್ಲಿ ಅನಂತಕುಮಾರ್ ಹೆಗಡೆ ಪ್ರಾಬಲ್ಯ ಅರಿತಿರುವ ಆಕಾಂಕ್ಷಿಗಳು ಅವರನ್ನು ಭೇಟಿಯಾಗಿ ಬರುತ್ತಾರೆಯೇ ಹೊರತು ತಮಗೆ ಬೆಂಬಲ ನೀಡಿ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ. ಒಂದು ವೇಳೆ ಕೇಂದ್ರದಿಂದ ಅನಂತಕುಮಾರ್ ಹೆಗಡೆ ಅವರೇ ಸ್ಪರ್ಧಿಸಬೇಕೆಂದು ಆದೇಶ ಬಂದರೆ, ಮತ್ತೆ ಅವರೇ ಕಣಕ್ಕಿಳಿಯುವುದರಲ್ಲಿ ಎರಡು ಮಾತಿಲ್ಲ.
ಲೋಕಸಭೆ ಆಕಾಂಕ್ಷಿ ಎಂದ ಆಸ್ನೋಟಿಕರ್: ಆದರೆ, ರಾಜ್ಯದಲ್ಲಿನ ಮೈತ್ರಿಯಿಂದಾಗಿ ಇಷ್ಟು ದಿನ ಸುಮ್ಮನಿದ್ದ ಜೆಡಿಎಸ್ ನಾಯಕರು ಇದೀಗ ಲೋಕಸಭೆ ಚುನಾವಣೆಗೆ ತಾವೂ ಸಹ ಆಕಾಂಕ್ಷಿಗಳೆಂದು ಘೋಷಿಸಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿಯಾದ ಬಳಿಕ ಸಂಪೂರ್ಣ ಬದಲಾದ ಹೇಳಿಕೆ ನೀಡುತ್ತಿರುವ ಆನಂದ್ ಆಸ್ನೋಟಿಕರ್, ''ನಾನು ಲೋಕಸಭೆ ಚುನಾವಣೆಯ ಆಕಾಂಕ್ಷಿ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಾನು ಮೋದಿಯವರ ಅಭಿಮಾನಿ ಎಂದು ಅಂದಿನಿಂದಲೂ ಹೇಳಿದ್ದು, ಅವರ ವಿರುದ್ಧ ಯಾವ ವಿಷಯವನ್ನೂ ಮಾತನಾಡಿಲ್ಲ. ನಮ್ಮ ರಾಷ್ಟ್ರ ಉಳಿಬೇಕಾದ್ರೆ, ಅಭಿವೃದ್ಧಿಗೆ ಪ್ರಧಾನಿ ಮೋದಿಯವರ ಅವಶ್ಯಕತೆಯಿದೆ'' ಎಂದಿದ್ದಾರೆ.
ಸ್ಪರ್ಧೆಗೆ ಸಿದ್ಧ ಎಂದ ಸೂರಜ್ ನಾಯ್ಕ: ಕಳೆದ ಭಾರೀಯ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಸೂರಜ್ ನಾಯ್ಕ ಸೋನಿ 60 ಸಾವಿರ ಮತಗಳ ಪಡೆದು ಭಾರಿ ಪೈಪೋಟಿ ನೀಡಿದ್ದರು. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ವಿರುದ್ಧ ಕೇವಲ 600 ಮತಗಳ ಅಂತರದಲ್ಲಿ ಸೋತಿದ್ದರು. ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅವರು, ''ಜಿಲ್ಲೆಯ ಸಂಪೂರ್ಣವಾಗಿರುವ ಪರಿಚಯ ಇದೆ. ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬಹುದಾದ ಎಲ್ಲಾ ಅರ್ಹತೆ ಸಹ ನನಗಿದೆ. ಒಂದು ವೇಳೆ ಅನಂತಕುಮಾರ್ ಹೆಗಡೆ ಅವರು ಸ್ಪರ್ಧೆ ಮಾಡದಿದ್ದರೆ, ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾದರೆ ನಾನು ಸಹ ಸ್ಪರ್ಧೆಗೆ ಸಿದ್ಧ'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಕ್ಷ ತೀರ್ಮಾನಿಸಿದರೆ ಸ್ಪರ್ಧೆ ಮಾಡುತ್ತೇನೆ: ಡಾ ಹೆಚ್ ಸಿ ಮಹಾದೇವಪ್ಪ