ಶಿರಸಿ: ತೋಟದ ಅಂಚು, ಬೆಟ್ಟ ಪ್ರದೇಶದಲ್ಲಿ ಬೆಳೆದು ಅರ್ಧಕ್ಕರ್ಧ ಫಸಲು ಬಳಕೆಯಾಗದೇ ಹಾಳಾಗುತ್ತಿದ್ದ ಹಲಸಿನಕಾಯಿ ಶಿರಸಿಯಲ್ಲಿ ಈಗ 'ಮೌಲ್ಯ’ ವೃದ್ಧಿಸಿಕೊಂಡಿದೆ. ನಗರದ ಮಾರುಕಟ್ಟೆಯಲ್ಲೇ ವಾರ್ಷಿಕವಾಗಿ ಕೋಟ್ಯಂತರ ಮೊತ್ತದ ವಹಿವಾಟು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಂದ ನಡೆಯುತ್ತಿದೆ. ಇದು ರೈತರ ಆರ್ಥಿಕ ಆದಾಯಕ್ಕೆ ದೊಡ್ಡ ವರದಾನವಾಗಿದೆ.
ಶಿರಸಿಯ ಕದಂಬ ಮಾರ್ಕೆಟಿಂಗ್, ಟಿಎಸ್ಎಸ್ ಸಂಸ್ಥೆಗಳು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಾದ ಚಿಪ್ಸ್, ಹಪ್ಪಳ, ಹಲಸಿನ ಹಣ್ಣಿನ ಚಾಕೊಲೇಟ್ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಖಾಸಗಿ ಮಳಿಗೆಗಳು, ಗ್ರಾಮೀಣ ಭಾಗದ ಸಹಕಾರ ಸಂಸ್ಥೆಗಳಲ್ಲಿ ವಹಿವಾಟು ಹೆಚ್ಚುತ್ತಿದೆ. ಮಾಹಿತಿ ಪ್ರಕಾರ, ಶಿರಸಿ ನಗರದಲ್ಲೇ ವರ್ಷಕ್ಕೆ ₹5 ಕೋಟಿಗೂ ಹೆಚ್ಚು ಮೊತ್ತದ ಹಲಸಿನ ಉತ್ಪನ್ನದ ವಹಿವಾಟು ನಡೆಯುತ್ತಿದೆ. ಈ ಬೆಳವಣಿಗೆ ಕಳೆದ ಒಂದು ದಶಕದಿಂದ ಈಚೆಗೆ ಆರಂಭವಾಗಿದೆ. ಆದರೆ, ಸಂಸ್ಥೆಗಳ ಸಹಕಾರದ ಜೊತೆಗೆ ಸರ್ಕಾರದಿಂದ ಇನ್ನಷ್ಟು ಸವಲತ್ತುಗಳು ಬೇಕು ಎನ್ನುವುದು ರೈತರ ಬೇಡಿಕೆ.
ಹಪ್ಪಳ, ಚಿಪ್ಸ್ ತಯಾರಿಕೆಗೆ ಮಾತ್ರ ಬಳಸುವ ವಾಡಿಕೆ: 2010ರಲ್ಲಿ ಮೊದಲ ಬಾರಿಗೆ ಕದಂಬ ಮಾರ್ಕೆಟಿಂಗ್ ಸಂಸ್ಥೆಯಿಂದ ಹಲಸಿನ ಮೇಳ ಆಯೋಜಿಸಿದ್ದು, ಈ ಭಾಗದಲ್ಲಿ ಹಲಸಿನಕಾಯಿಗೆ ಪ್ರಾಮುಖ್ಯ ತಂದುಕೊಟ್ಟಿತು. ನಂತರ ಬೇಸಿಗೆ ಅವಧಿಯಲ್ಲಿ ದೊರೆಯುವ ಹಲಸಿನಕಾಯಿಯನ್ನು ಹಪ್ಪಳ, ಚಿಪ್ಸ್ ತಯಾರಿಕೆಗೆ ಮಾತ್ರ ಬಳಸುವ ವಾಡಿಕೆ ಇತ್ತು. ಉತ್ಪನ್ನ ತಯಾರಿಕೆ ಹಳ್ಳಿಗಳಲ್ಲಿ ಮನೆ ಬಳಕೆಗೆ ಮಾತ್ರ ಸೀಮಿತವಾಗಿತ್ತು.
ಪ್ರತಿಬಾರಿ ಮೇಳ ಆಯೋಜನೆಗೊಳ್ಳುತ್ತಿದ್ದ ಪರಿಣಾಮ ವಾಣಿಜ್ಯೀಕರಣದತ್ತ ಹಲಸನ್ನು ಕೊಂಡೊಯ್ಯುವ ಯೋಚನೆ ಮಾಡಿದರು. ಅದರ ಫಲವಾಗಿ ಹಲಸಿನ ಹಲವು ಮೌಲ್ಯವರ್ಧಿತ ಉತ್ಪನ್ನಗಳು ಪರಿಚಿತವಾಗಿವೆ. ಪ್ರಸಕ್ತ ಸಾಲಿನಲ್ಲೇ ಸಂಸ್ಥೆಯಿಂದ ₹50 ಲಕ್ಷಕ್ಕೂ ಹೆಚ್ಚು ಮೌಲ್ಯದ ಉತ್ಪನ್ನ ಮಾರಾಟ ಕಂಡಿದೆ’ ಎಂದು ಕದಂಬ ಸಂಸ್ಥೆ ವಿಶ್ವೇಶ್ವರ ಭಟ್ ವಿವರಿಸಿದರು.
ಹೊರರಾಜ್ಯಕ್ಕೂ ಉತ್ಪನ್ನ ರವಾನೆ: ಒಟ್ಟಾರೆಯಾಗಿ ಮನೆಯ ಸುತ್ತ ಇರುವ ಮರಗಳ ಕಾಯಿಗಳಿಂದ ಹಪ್ಪಳ, ಚಿಪ್ಸ್ ಸಿದ್ಧಪಡಿಸಿ, ರೈತರು ಈಗ ಆರ್ಥಿಕ ಶಕ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ವಹಿವಾಟು ಪ್ರಮಾಣ ಪ್ರತಿ ವರ್ಷ ಏರಿಕೆಯಾಗುತ್ತಿದ್ದು, ಹೊರರಾಜ್ಯಕ್ಕೂ ಉತ್ಪನ್ನ ರವಾನೆಯಾಗುತ್ತಿದೆ. ಇದರಿಂದ ಇಲ್ಲಿನ ಕೃಷಿಕರಿಗೆ ಅಡಿಕೆ ಜೊತೆ ಹಲಸು ಆರ್ಥಿಕ ಶಕ್ತಿಯಾಗಿ ಬೆಳೆದಿದೆ.
ಓದಿ: ನವೆಂಬರ್ನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸಿ: ಕೊರಿಯಾ ಗಣರಾಜ್ಯಕ್ಕೆ ಸಿಎಂ ಮನವಿ