ಕಾರವಾರ: ಲಾಕ್ಡೌನ್ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳು ಹೊರತುಪಡಿಸಿ ಬೇರಾವುದೇ ವಸ್ತುಗಳ ಮಾರಾಟ ಹಾಗೂ ಸಾಗಾಟ ಮಾಡದಂತೆ ಜಿಲ್ಲಾಡಳಿತ ಖಡಕ್ ಆದೇಶ ಹೊರಡಿಸಿದೆ. ಮಾತ್ರವಲ್ಲದೆ ಪ್ರತಿ ತಾಲೂಕು ಹಾಗೂ ಅಂತರ್ ರಾಜ್ಯ ಗಡಿಗಳನ್ನು ಬಿಗಿಗೊಳಿಸಲಾಗಿದೆ. ಪೊಲೀಸ್ ಇಲಾಖೆ ಬೇರೆ ರಾಜ್ಯದಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಆದರೆ ನೆರೆಯ ರಾಜ್ಯ ಗೋವಾದಿಂದ ಜಿಲ್ಲೆಗೆ ಅಕ್ರಮವಾಗಿ ಮದ್ಯ ಹರಿದುಬರುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಗುರುವಾರ ತಡರಾತ್ರಿ ಗೋವಾದಿಂದ ಮೀನಿನ ವಾಹನದಲ್ಲಿ ತುಂಬಿಕೊಂಡು ಬಂದ 50 ಸಾವಿರ ರೂ. ಮಾಲ್ಯದ ಮದ್ಯ ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಲಾಗಿದೆ. ಕಡಿಮೆ ದರದಲ್ಲಿ ವಾಹನ ಹಾಗೂ ಅರಣ್ಯದ ಮೂಲಕ ಮದ್ಯ ಸಾಗಿಸುವ ದಂಧೆಕೋರರು, ರಾಜ್ಯಕ್ಕೆ ತಂದು ಎರಡು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಲಾಕ್ಡೌನ್ ಅವಧಿಯಲ್ಲಿ ಸುಮಾರು ಎರಡು ಲಕ್ಷ ಮೌಲ್ಯದ ಒಂದು ಸಾವಿರ ಲೀಟರ್ ಅಕ್ರಮ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು.
ಇನ್ನು ರಾಜ್ಯಾದ್ಯಂತ ಮದ್ಯ ಮರಾಟಕ್ಕೆ ಭಾರೀ ಬೇಡಿಕೆ ಕೇಳಿ ಬರುತ್ತಿದ್ದು, ಇದೇ ಸಮಯ ಉಪಯೋಗಿಸಿಕೊಂಡು ಜಿಲ್ಲೆಯ ಕೆಲ ಕಳ್ಳ ದಂಧೆಕೋರರು ಕಳ್ಳ ದಾರಿಯಲ್ಲಿ ಮದ್ಯ ಸಾಗಿಸುತ್ತಿದ್ದಾರೆ. ಇದರಿಂದ ಇಲಾಖೆಗಳ ಮೇಲೆಯೇ ಅನುಮಾನ ಮೂಡುವಂತಾಗಿದೆ. ಕೂಡಲೇ ಈ ಬಗ್ಗೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಬಿಗಿ ಕ್ರಮಗಳೊಂದಿಗೆ ಅಕ್ರಮ ಮದ್ಯ ಸಾಗಾಟಕ್ಕೆ ಕಡಿವಾಣ ಹಾಕಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.