ಕಾರವಾರ: ನಾನು ಈವರೆಗೆ ಮಂತ್ರಿ ಮಾಡಿ ಎಂದು ಯಾರ ಮುಂದೆಯೂ ಹೋಗಿ ನಿಂತಿಲ್ಲ. ಹಾಗೆ ನಿಲ್ಲುವವನೂ ಅಲ್ಲ. ಒಂದು ವೇಳೆ ಮಂತ್ರಿಸ್ಥಾನದಿಂದ ಕೈ ಬಿಟ್ಟರೆ ವಿಶ್ರಾಂತಿ ಪಡೆಯುತ್ತೇನೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾನು ನನ್ನ ಜೀವನದಲ್ಲಿ ಯಾವತ್ತಿಗೂ ಮಂತ್ರಿ ಮಾಡಿ ಎಂದು ಕೇಳಿಲ್ಲ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ. ಇಡೀ ಸಚಿವ ಸಂಪುಟದಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಈಗಾಗಲೇ ಹೇಳಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬಂದಿರುವುದನ್ನು ನಾವು ಸ್ವೀಕರಿಸಬೇಕು. ಜತೆಗೆ ನಮ್ಮ ತಪ್ಪನ್ನು ತಿದ್ದಿಕೊಂಡು ಪಾಠ ಕಲಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಹಿಡಿಯಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಆನಂದ್ ಅಸ್ನೋಟಿಕರ್ ಸೋಲಿಗೆ ನಾನು ಕಾರಣ ಎನ್ನುವುದು ಸರಿಯಲ್ಲ. ಅವರು ಸೋತಿರುವ ಮತಗಳ ಅಂತರವನ್ನು ನಾನು ಟರ್ನ್ ಮಾಡುವ ಹಾಗಿದ್ದರೆ ಒಪ್ಪಬಹುದಿತ್ತು. ಆದರೆ ಇದೆಲ್ಲವನ್ನು ಜನರಿಗೆ ಬಿಡುತ್ತೇನೆ. ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಕೂಡ ಸೋಲು-ಗೆಲುವನ್ನು ಅನುಭವಿಸಿದ್ದೇನೆ. ಆದರೆ ಗೆದ್ದಾಗ ಹೊಗಳುವುದು, ಸೋತಾಗ ಇನ್ನೊಬ್ಬರನ್ನು ಹೊಣೆ ಮಾಡುವುದು ಎಷ್ಟು ಸರಿ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.