ಕಾರವಾರ: ಕೊರೊನಾ ವೈರಸ್ ದಾಳಿಗೆ ದೇಶವೇ ಸ್ತಬ್ಧಗೊಂಡಿದೆ. ಈ ನಡುವೆ ಅನಗತ್ಯವಾಗಿ ಓಡಾಡುತ್ತಿರುವವರಿಗೂ ಪೊಲೀಸರು ಲಾಠಿ ರುಚಿ ತೋರಿಸಿ ಮನೆಯಲ್ಲಿ ಕೂರುವಂತೆ ಮಾಡಿದ್ದಾರೆ. ಆದ್ರೆ ಇಂತಹ ಬಿಗುವಿನ ವಾತಾವರಣದ ನಡುವೆಯೂ ಅಂಕೋಲಾ ಪಟ್ಟಣದಲ್ಲಿರುವ ಮನೆಯೊಂದಕ್ಕೆ ವಿಶೇಷ ಅತಿಥಿಗಳು ಆಗಮಿಸಿ ಮನೆಯವರನ್ನು ಆಶ್ಚರ್ಯಚಕಿತರಾಗುವಂತೆ ಮಾಡಿದ್ದಾರೆ.
ಅರ್ರೆ... ಎಲ್ಲೆಡೆ ಲಾಕ್ ಡೌನ್ ಇದೆ. ಈ ವೇಳೆ ಸ್ಥಳೀಯರು ಓಡಾಡುವುದೇ ಕಷ್ಟ. ಅಂತಹುದರಲ್ಲಿ ವಿಶೇಷ ಅತಿಥಿ ಹೇಗಪ್ಪಾ ಬಂದ್ರು..? ಯಾರು ಅವರು? ಎಲ್ಲಿಂದ ಬಂದ್ರು ಅಂದುಕೊಂಡ್ರಾ. ಹೀಗೆ ಬಂದವವರು ವ್ಯಕ್ತಿಗಳಲ್ಲ. ಬದಲಿಗೆ ಕಾಡಿನಿಂದ ನಾಡಿಗೆ ಬಂದ ಹಾರ್ನ್ ಬಿಲ್ ಪಕ್ಷಿಗಳು.
ಹೌದು ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗದ ಅರಣ್ಯದಲ್ಲಿ ಕಂಡು ಬರುವ ಹಾರ್ನ್ ಬಿಲ್ ಪಕ್ಷಿಗಳು ಅಂಕೋಲಾ ಪಟ್ಟಣದ ವಂದಿಗೆಯ ಕೈಗಾರಿಕಾ ಇಲಾಖೆಯ ಅಧಿಕಾರಿ ನಾಗರಾಜ್ ನಾಯಕ ಎನ್ನುವವರ ಮನೆಗೆ ದೊಡ್ಡ ಗಾತ್ರದ ಮೂರು ಹಾರ್ನ್ ಬಿಲ್ ಪಕ್ಷಿಗಳು ಇಂದು ಆಗಮಿಸಿದ್ದವು. ಸಾಮಾನ್ಯವಾಗಿ ನಾಡಿನತ್ತ ಹಾರ್ನ್ ಬಿಲ್ ಪಕ್ಷಿಗಳು ಬರುವುದು ಕಡಿಮೆ. ಒಂದೊಮ್ಮೆ ಪಕ್ಷಿಗಳು ಬಂದರೂ ಕೆಲವೆಡೆ ಮರದ ಮೇಲೆ ಕುಳಿತು ವಾಪಾಸ್ ಕಾಡಿನತ್ತ ಹೋಗುತ್ತದೆ.
ಆದರೆ ನಾಗರಾಜ್ ನಾಯಕರ ಮನೆಗೆ ಬಂದಿದ್ದ ಹಾರ್ನ್ ಬಿಲ್ ಪಕ್ಷಿಗಳು ಒಂದು ದಿನ ಪೂರ್ತಿ ಮನೆಯ ಬಳಿಯೇ ಇದ್ದವು. ಎರಡು ಪಕ್ಷಿಗಳು ಸಂಜೆ ವೇಳೆ ಹಾರಿ ಹೋದರೆ ಒಂದು ಪಕ್ಷಿ ಮಾತ್ರ ಮನೆಯ ಕಟ್ಟಡದೊಳಗೆ ಬಂದು ಕುಳಿತಿತ್ತು. ಹಾರ್ನ್ ಬಿಲ್ ಪಕ್ಷಿಯ ಆಕೃತಿ, ಕೊಕ್ಕು, ಬಣ್ಣ ಎಲ್ಲವನ್ನ ಹತ್ತಿರದಿಂದಲೇ ನೋಡಿ ಮನೆಯವರು ಸಕತ್ ಖುಷಿ ಪಟ್ಟಿದ್ದಾರೆ.
ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಜನರು ಓಡಾಟ ಪಟ್ಟಣದಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಹಾರ್ನ್ ಬಿಲ್ ಪಕ್ಷಿಗಳು ಮನೆಯ ಕಟ್ಟಡದೊಳಗೆ ಬಂದಿದ್ದು ಮನೆಯಲ್ಲಿಯೇ ಕುಳಿತು ಬೇಸರವಾಗುತ್ತಿದ್ದ ಕುಟುಂಬದವರಿಗೆ ಸ್ವಲ್ಪ ಮನಸ್ಸು ರಿಲ್ಯಾಕ್ಸ್ ಆಗುವಂತೆ ಹಾರ್ನ್ ಬಿಲ್ ಮಾಡಿದೆ ಎಂದು ಮನೆಯವರು ಅಭಿಪ್ರಾಯಪಟ್ಟರು.