ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಜೊತೆಗೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಳ್ಳ ದಾಟಿಕೊಂಡು ಹೋಗಬೇಕಿರುವುದರಿಂದ ಶಾಲೆ ತೊರೆಯುತ್ತಿದ್ದಾರೆ.
ಹೊನ್ನಾವರದಿಂದ 48 ಕಿಲೋಮೀಟರ್ ದೂರದಲ್ಲಿರುವ ಉಪ್ಪೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಮೆ ಗ್ರಾಮ 1200ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿರುವ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಮಹಿಮೆ ಗ್ರಾಮದಿಂದ 8 ಕಿ.ಮೀ ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಹೋಗಬೇಕು. ದಾರಿಮಧ್ಯದಲ್ಲಿ ಹಳ್ಳ ಎದುರಾಗುವುದರಿಂದ ಈ ಹಳ್ಳ ದಾಟುವುದೇ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ರಭಸದಿಂದ ನೀರು ಹರಿಯುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲಾಗದೆ ರಜೆ ಹಾಕುವ ಅನಿವಾರ್ಯತೆಯಿದೆ.
ಮಳೆಗಾಲದಲ್ಲಿ ನೆರೆ ಬರುವುದರಿಂದ ಹಳ್ಳ ದಾಟುವುದು ಕಷ್ಟಸಾಧ್ಯ. ಹೀಗಾಗಿ ಹೆಚ್ಚು ನೀರಿದ್ದ ದಿನ ಶಾಲೆ, ಕಾಲೇಜುಗಳಿಗೆ ತೆರಳಲಾಗುವುದಿಲ್ಲ. ಇನ್ನು ಅಲ್ಪ ನೀರು ಇಳಿದರೆ ಊರಿನ ಜನ ದಡದ ಎರಡೂ ಕಡೆ ಹಗ್ಗ ಹಾಕಿ ಮಕ್ಕಳನ್ನು ದಾಟಿಸುತ್ತಾರೆ. ಅಷ್ಟರಲ್ಲಿ ಶಾಲೆ, ಕಾಲೇಜಿನ ಸಮಯ ಪ್ರಾರಂಭವಾಗಿರುತ್ತದೆ. ಹೀಗಾಗಿ ತಮ್ಮ ಮಕ್ಕಳ ಜೀವಕ್ಕೆ ಹೆದರಿರುವ ಹಲವು ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುವ ಬಗ್ಗೆ ಯೋಚಿಸುತ್ತಿದ್ದಾರೆ.
ಸ್ವಾತಂತ್ರ್ಯ ದೊರಕಿದಾಗಿನಿಂದಲೂ ಮಹಿಮೆ ಹಿಂದುಳಿದ ಗ್ರಾಮದ ಪಟ್ಟಿಯಲ್ಲಿದೆ. ಇಲ್ಲಿಗೆ ಸಮರ್ಪಕ ರಸ್ತೆ, ಸೇತುವೆಗಾಗಿ ಕಳೆದ 5 ದಶಕದಿಂದ ಹೋರಾಟ ನಡೆಯುತ್ತಲೇ ಇದೆ. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಗ್ರಾಮಕ್ಕೆ ಈವರೆಗೂ ಯಾವುದೇ ಮೂಲ ಸೌಕರ್ಯಗಳು ತಲುಪದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಳೆಗಾಲದ ಸಂದರ್ಭದಲ್ಲಿ ಗರ್ಭಿಣಿಯರು ಹಾಗೂ ರೋಗಿಗಳ ಕಷ್ಟ ಹೇಳತೀರದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಂತವರನ್ನು ಹೊತ್ತುಕೊಂಡೇ ಹೊಳೆ ದಾಟಿಸಬೇಕಾದ ದುಃಸ್ಥಿತಿ ಇದೆ. ಈ ಸಾಕಷ್ಟು ಬಾರಿ ಇಲ್ಲಿನ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.