ಕಾರವಾರ: ಉತ್ತರಕನ್ನಡದಲ್ಲಿ ಕಳೆದೊಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ದಿನಕ್ಕೊಂದು ಅವಾಂತರ ಸೃಷ್ಟಿಸುತ್ತಿದೆ. ಮಳೆಯ ತೀವ್ರತೆಯಿಂದ ಹೊನ್ನಾವರದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಒಂದೇ ಕುಟುಂಬದ 6 ಮಂದಿ ಗಾಯಗೊಂಡಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಮರಗಳು ಧರೆಗುರುಳಿದ್ದು ವಿದ್ಯುತ್ ಇಲ್ಲದೆ ಜನರು ಪರದಾಡಿದ್ದಾರೆ. ಜೋಯಿಡಾ ತಾಲ್ಲೂಕಿನ ಅನಮೋಡ್‌ನಿಂದ ಗೋವಾ ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4ಎ ರಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸರಕು ಸಾಗಣೆ ವಾಹನಗಳು ರಸ್ತೆಯಲ್ಲೇ ನಿಂತಿದ್ದವು.
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 531.3 ಮಿಮೀ ಮಳೆಯಾಗಿದೆ. ಹೊನ್ನಾವರದಲ್ಲಿ 75.3 ಮಿಮೀ ಮತ್ತು ಶಿರಸಿಯಲ್ಲಿ 105 ಮಿ ಮೀ ಮಳೆ ಸುರಿದಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಗಾಳಿಸಹಿತ ಜಡಿಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ 8ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು ಕಡಲತೀರದ ನಿವಾಸಿಗಳು ಹಾಗೂ ಮೀನುಗಾರರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಇದನ್ನೂ ಓದಿ: ಕೊಡಗು: ನಿರಂತರ ಮಳೆಗೆ ಗುಡ್ಡ ಕುಸಿತ ..ಆತಂಕದಲ್ಲಿ ಜನ