ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಇವತ್ತೂ ಕೂಡಾ ಧಾರಾಕಾರ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದೊಂದು ವಾರದಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಸಣ್ಣದಾಗಿ ಸುರಿಯುತ್ತಿದ್ದ ಮಳೆ ಎರಡು ದಿನದಿಂದ ಬಿರುಸು ಪಡ್ಕೊಂಡಿದೆ. ಇದೀಗ ದಿನವಿಡೀ ಬಿಟ್ಟು ಬಿಡದೆ ಸುರಿಯಲಾರಂಭಿಸಿದೆ.
ಕಾರವಾರದಲ್ಲಿ ಬೆಳಗ್ಗೆಯಿಂದಲೇ ಮಳೆ ಜೋರಾಗಿದ್ದು ನಗರದ ಚರ್ಚ್ ರಸ್ತೆಗಳಲ್ಲಿ ನೀರು ತುಂಬಿ ಹರಿದ ಪರಿಣಾಮ, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಇನ್ನು ತಾಲೂಕಿನ ಮುದಗಾದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿ, ಕುಟುಂಬಸ್ಥರು ಪರದಾಟ ಅನುಭವಿಸಿದ್ರು.
ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರ, ಮುಂಡಗೋಡ ಭಾಗಗಳಲ್ಲಿಯೂ ವರ್ಷಧಾರೆ ಜೋರಾಗಿದೆ. ಕರಾವಳಿ ಭಾಗಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಜನ ತತ್ತರಿಸಿದ್ದರು. ಆದರೀಗ ಹವಾಮಾನ ಇಲಾಖೆ ಇನ್ನೂ ಕೆಲ ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದು, ಬೆಳೆದು ನಿಂತ ಪೈರಿಗೆ ಹಾನಿಯಾಗುತ್ತಿದೆ ಎಂದು ರೈತರು ಚಿಂತಿತರಾಗಿದ್ದಾರೆ.