ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಭಾನುವಾರ ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಎಡಬಿಡದೆ ವರ್ಷಧಾರೆಯಾಗುತ್ತಿದ್ದು, ಕಳೆದೆರಡು ದಿನದಿಂದ ಗಾಳಿ ಕೂಡ ಜೋರಾಗಿದೆ.
ಕರಾವಳಿಯ ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ, ಕುಮಟಾ ಹಾಗೂ ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಭಾರಿ ವರುಣನ ಅಬ್ಬರ ಜೋರಾಗಿದೆ. ಇದರಿಂದ ಬಹುತೇಕ ಹಳ್ಳಕೊಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಕಾರವಾರದಲ್ಲಿ ಬೆಳಿಗ್ಗೆ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆ ಮಧ್ಯಾಹ್ನದ ಹೊತ್ತಿಗೆ ಜೋರಾಗಿದ್ದು, ಗಾಳಿ ಕೂಡ ವೇಗವಾಗಿ ಬೀಸತೊಡಗಿದೆ.
ಮಳೆಗೆ ನಗರದ ಪಂಚರೇಸಿವಾಡಾದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಅಂಕೋಲಾ, ಗೋಕರ್ಣದಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಇನ್ನು ಕಾಳಿ ನದಿಗೆ ಕದ್ರಾ ಬಳಿ ನಿರ್ಮಿಸಲಾದ ಡ್ಯಾಮ್ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಕಾರಣ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ.
ಈ ಕಾರಣದಿಂದ ಡ್ಯಾಮ್ ಕೆಳಭಾಗದಲ್ಲಿ ನದಿಯಂಚಿನ ಜನರಿಗೆ ಈಗಾಗಲೇ ನೋಟಿಸ್ ನೀಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಅಲ್ಲದೆ ಮಳೆ ಹೀಗೆ ಮುಂದುವರಿದಲ್ಲಿ ಡ್ಯಾಮ್ ಭರ್ತಿಯಾಗುವ ಸಾಧ್ಯತೆ ಇದ್ದು, ಹೆಚ್ಚುವರಿ ನೀರನ್ನು ಹೊರ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.