ಶಿರಸಿ: ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ರಭಸದ ಗಾಳಿಗೆ ಗ್ರಾಮೀಣ ಭಾಗದಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ 30 ಗಂಟೆಗಳಿಂದ ಮಳೆ ಸುರಿಯುತ್ತಲಿದೆ. ನಗರದ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಕಳೆದ ಎರಡು ದಿನಗಳಿಂದ ಅಂದಾಜು 50ಮಿ.ಮೀ ಮಳೆಯಾಗಿದ್ದು, ಇಲ್ಲಿನ ನದಿಗಳಾದ ಅಘನಾಶಿನಿ, ಬೇಡ್ತಿ, ವರದಾ, ಶಾಲ್ಮಲಾ ನದಿಗಳು ತುಂಬಿ ಹರಿಯುತ್ತಿವೆ. ನಗರದ ದೇವಿ ಕೆರೆ, ಕೋಟೆ ಕೆರೆಯೂ ಸಹ ಭರ್ತಿಯಾಗಿದೆ. ಮಳೆ-ಗಾಳಿಗೆ ಗ್ರಾಮೀಣ ಭಾಗದಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದ ದೃಶ್ಯ ಸಾಮಾನ್ಯವಾಗಿದೆ.
ಎರಡು ದಿನಗಳಿಂದ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಕೆಲ ಕಡೆಗಳಲ್ಲಿ ಮನೆಗಳ ಮೇಲೆ ಮರಗಳು ಬಿದ್ದ ಪರಿಣಾಮ ನಿವಾಸಿಗಳಿಗೆ ಸಣ್ಣ ಪುಟ್ಟ ಹಾನಿಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.