ಭಟ್ಕಳ: ಕಳೆದ ಮೂರ್ನಾಲ್ಕು ದಿನದಿಂದ ಬಿಡುವು ನೀಡಿದ್ದ ಮಳೆ, ಇಂದು ಮುಂಜಾನೆಯಿಂದಲೇ ಧಾರಾಕಾರವಾಗಿ ಸುರಿಯಲಾರಂಭಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸಹಿತ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.
ಕೆಲವೇ ಗಂಟಗಳಷ್ಟೇ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ಭಟ್ಕಳದ ಸಂಶುದ್ದೀನ್ ಸರ್ಕಲ್, ರಂಗಿನಕಟ್ಟಾ ಹೆದ್ದಾರಿ ಪ್ರದೇಶಗಳೆಲ್ಲವೂ ಸಂಪೂರ್ಣ ಜಲ ಮಯವಾಗಿವೆ, ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೆ ಗಂಟೆಗಟ್ಟಲೆ ಸಂಚಾರ ದಟ್ಟಣೆ ಕೂಡ ಉಂಟಾಗಿದ್ದು, ಸಾಹಸಪಟ್ಟು ನೀರಿನಲ್ಲಿಯೇ ವಾಹನ ಚಲಿಸಬೇಕಾಯಿತು.
ಸಂಶುದ್ದೀನ್ ಸರ್ಕಲ್ ಬಳಿಯಲ್ಲಿನ ಒಳ ಚರಂಡಿ ಪುರಸಭೆಯ ನಿಷ್ಕಾಳಜಿಯಿಂದ ಹೂಳು ತುಂಬಿಕೊಂಡಿದ್ದು, ಧಾರಾಕಾರವಾಗಿ ಸುರಿದ ಮಳೆಗೆ ಚರಂಡಿ ತುಂಬಿ ನೀರು ರಸ್ತೆಗೆ ಬಂದು ನಿಂತಿದೆ. ಈ ಬಗ್ಗೆ ಇಲ್ಲಿನ ಆಟೋ ರಿಕ್ಷಾ ಚಾಲಕರು, ಅಂಗಡಿಕಾರರು, ವ್ಯಾಪಾರಸ್ಥರು ಪುರಸಭೆ ಗಮನಕ್ಕೆ ತಂದು ಮನವಿ ಮಾಡಿದರೂ ಸಹ ಪುರಸಭೆ ಕ್ರಮಕ್ಕೆ ಮುಂದಾಗಿಲ್ಲ.
ಇನ್ನು ರಂಗಿನಕಟ್ಟೆ ಪ್ರದೇಶವೂ ಸಹ ಇದೇ ರೀತಿಯ ಅವ್ಯವಸ್ಥೆಯಿಂದ ಕೂಡಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಯ ನೀರು ರಸ್ತೆಗೆ ಬರುತ್ತಿದೆ. ಇನ್ನು ಹೆದ್ದಾರಿ ಅಕ್ಕ ಪಕ್ಕದ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ. ಇದು ಪ್ರತಿ ವರ್ಷದ ಪುನರಾವರ್ತಿತವಾಗಿದೆಯೋ ಹೊರತು ಜನಪ್ರತಿನಿಧಿಗಳಾಗಲಿ, ಇಲಾಖೆಯಾಗಲಿ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಣ್ಕುಳಿಯ ಪುಷ್ಪಾಂಜಲಿ ಟ್ಯಾಕೀಸ್ ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯೂ ಸಂಪೂರ್ಣ ಜಲಾವೃತವಾಗಿದ್ದು, ಅಂದಾಜಿನ ಮೇಲೆ ವಾಹನ ಓಡಿಸಬೇಕಾಗಿ ಬಂದಿದೆ. ಅಲ್ಲದೆ ಅಂಗಡಿಗಳಿಗೂ ನೀರು ನುಗ್ಗಿದೆ.