ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇದು ನದಿ ಪಾತ್ರಗಳಲ್ಲಿರುವ ಜನರ ಆತಂಕಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಅಬ್ಬರಿಸಿ ಕೊಂಚ ತಣ್ಣಗಾಗಿದ್ದ ಮಳೆ, ಇಂದು ಬೆಳಗ್ಗೆಯಿಂದ ಮತ್ತೆ ಜೋರಾಗಿದೆ. ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ನಿರಂತರವಾಗಿ ಸುರಿಯುತ್ತಿದೆ.
ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳಲ್ಲಿಯೂ ಆರ್ಭಟ ಹೆಚ್ಚಿದೆ. ಮಾತ್ರವಲ್ಲದೆ ಮೋಡ ಕವಿದ ವಾತಾವರಣ ಇದ್ದು, ನದಿಗಳು ತುಂಬಿ ಹರಿಯುತ್ತಿರುವ ಕಾರಣ ನದಿ ಪಾತ್ರಗಳಲ್ಲಿರುವ ಜನರಿಗೆ ಆತಂಕದ ಸ್ಥಿತಿ ಮುಂದುವರಿದಿದೆ.
ಮಳೆ ಪ್ರಮಾಣ: ಇನ್ನು ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ಅಂಕೋಲಾದಲ್ಲಿ 36.0 ಮಿ.ಮೀ, ಭಟ್ಕಳ 53.0 ಮಿ.ಮೀ, ಹಳಿಯಾಳ 25.4 ಮಿ.ಮೀ, ಹೊನ್ನಾವರ 17.9 ಮಿ.ಮೀ, ಕಾರವಾರ 14.3 ಮಿ.ಮೀ, ಕುಮಟಾ 23.1 ಮಿ.ಮೀ, ಮುಂಡಗೋಡ 34.6 ಮಿ.ಮೀ, ಸಿದ್ದಾಪುರ 86.8 ಮಿ.ಮೀ ಶಿರಸಿ 108.5 ಮಿ.ಮೀ, ಜೋಯಿಡಾ 32.4ಮಿ.ಮೀ, ಯಲ್ಲಾಪುರ 113.6 ಮಿ.ಮೀ. ಮಳೆಯಾಗಿದೆ.