ಕಾರವಾರ: ಭಾರೀ ಮಳೆಗೆ ಮಾಣಿ ಹೊಳೆ ಉಕ್ಕಿ ಹರಿದ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದು, ಬಡ ಕುಟುಂಬವೊಂದು ಉಟ್ಟ ಬಟ್ಟೆ ಬಿಟ್ಟು ಬೇರೇನು ಇಲ್ಲದೆ ಕಂಗಾಲಾಗಿರುವ ಘಟನೆ ಸಿದ್ದಾಪುರ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಕರ್ಜಗಿ ಗ್ರಾಮದ ಮಹಾಬಲೇಶ್ವರ ಗೌಡ ಎಂಬುವವರ ಮನೆ ಸಂಪೂರ್ಣ ನೆಲಸಮವಾಗಿದೆ. ಹೊಳೆಯ ಪಕ್ಕದಲ್ಲಿರುವ ಮನೆಗೆ ಮಳೆ ನೀರು ಗುರುವಾರ ತಡರಾತ್ರಿಯೇ ನುಗ್ಗಿದ ಪರಿಣಾಮ ಸಂಪೂರ್ಣ ಜಲಾವೃತಗೊಂಡಿತ್ತು. ತಕ್ಷಣ ಮನೆಯಲ್ಲಿದ್ದ ತಾಯಿ ಮತ್ತು ಮಗ ಇಬ್ಬರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಆದರೆ ನೆರೆ ನಿರಂತರವಾಗಿ ಏರಿದ ಪರಿಣಾಮ ಮನೆ ಭಾಗಶಃ ಮುಳುಗಡೆಯಾಗಿ ಯಜಮಾನನ ಕಣ್ಣೆದುರೆ ಸಂಪೂರ್ಣ ಕುಸಿದುಬಿದ್ದಿದೆ. ಉಟ್ಟ ಬಟ್ಟೆಯಿಂದ ಮನೆಯಿಂದ ಹೊರ ಬಂದಿದ್ದವರು. ಇದೀಗ ಸರ್ವಸ್ವವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಮನೆಯಲ್ಲಿದ್ದ ಅಕ್ಕಿ, ಭತ್ತ, ಬಟ್ಟೆ, ಪಾತ್ರೆ ಅಲ್ಪ ಸ್ವಲ್ಪ ಹಣ ಎಲ್ಲವೂ ನೀರುಪಾಲಾಗಿ, ಕುಟುಂಬ ಬೀದಿಗೆ ಬಿದ್ದಿದೆ.
ಮಹಾಬಲೇಶ್ವರ ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದು, ಹೆಂಡತಿ ಹೆರಿಗೆಯಾದ ಕಾರಣ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದಾರೆ. ತಾಯಿಯೊಂದಿಗೆ ಮನೆಯಲ್ಲಿದ್ದ ಮಹಾಬಲೇಶ್ವರ ಅವರ ಕುಟುಂಬ ಇದೀಗ ಎಲ್ಲವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ತಮಗೆ ತುರ್ತು ಅಗತ್ಯತೆಗಳನ್ನು ಪೂರೈಕೆ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
(ನಾರಾಯಣಪುರ ಅಣೆಕಟ್ಟಿನಲ್ಲಿ ನೀರಿನ ಭೋರ್ಗರೆತಕ್ಕೆ ಬಣ್ಣಬಣ್ಣದ ಬೆಳಕಿನ ಮೆರುಗು)