ಶಿರಸಿ: ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹೊಸ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ವಿಧವೆ ಮೇಲೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಬಾಳೆಕೈ ಗ್ರಾಮದ ನಿವಾಸಿ ಗೀತಾ ಗಣಪತಿ ನಾಯ್ಕ ಮೇಲೆ ಇಲಾಖೆಯ ವತಿಯಿಂದ ದೌರ್ಜನ್ಯ ನಡೆದಿರುವ ಆರೋಪ ಕೇಳಿಬಂದಿದೆ. ಈಕೆಯು ತನ್ನ ಮಾವನ ಕಾಲದಿಂದ ಉಳಿದುಕೊಂಡು ಬಂದಿದ್ದ ಅರಣ್ಯ ಅತಿಕ್ರಮಣ ಜಾಗದಲ್ಲಿ ಹೊಸ ಮನೆ ನಿರ್ಮಾಣ ಮಾಡಲು ಹೊರಟಾಗ ಅರಣ್ಯ ಇಲಾಖೆಯವರು ಬಂಧಿಸಿ ಕರೆ ತಂದಿದ್ದಾರೆ. ಆದರೆ ಕರೆ ತರುವ ವೇಳೆ ಮತ್ತು ಕಚೇರಿಯಲ್ಲಿ ಸರಿಯಾದ ಊಟ ತಿಂಡಿಯನ್ನೂ ನೀಡದೇ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.
ಊಟವಿಲ್ಲದ ಕಾರಣ ದೈಹಿಕವಾಗಿ ಅಶಕ್ತತೆಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಎದುರಾಗಿದೆ. ಇಲಾಖೆ ಸಿಬ್ಬಂದಿಯು ಗೀತಾಳನ್ನು ಸೋಮವಾರ ಮಧ್ಯಾಹ್ನ ಮನೆಯಿಂದ ಕಚೇರಿಗೆ ಕರೆದುಕೊಂಡು ಬಂದಿದ್ದು, ನಂತರ ಗೀತಾ ನಾಯ್ಕ ಜ್ವರದಿಂದ ಬಳಲುತ್ತಿರುವುದಾಗಿ ತಿಳಿಸಿದ ಕಾರಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಯರೆಗೆ ಊಟ ಇಲ್ಲದೇ ಜ್ವರದಿಂದ ಬಳಲುತ್ತಿದ್ದ ಗೀತಾ ಮೆಟ್ಟಿಲಿನ ಮೇಲಿಂದ ಕೆಳಗಡೆ ಬಿದ್ದು, ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ತಮಗೆ ನ್ಯಾಯ ಒದಗಿಸಬೇಕು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗೀತಾಳ ಕುಟುಂಬದವರು ಶಿರಸಿ ಡಿವೈಎಸ್ಪಿ ಭಾಸ್ಕರ್ ಒಕ್ಕಲಿಗ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇನ್ನು ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಆಸ್ಪತ್ರೆಗೆ ಭೇಟಿ ನೀಡಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಸಗಿ ವಿಧವೆ ಮಹಿಳೆಯನ್ನು ಇಲಾಖೆಗೆ ಕರೆದುಕೊಂಡು ಬಂದು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ. ಅನ್ಯಾಯಕ್ಕೆ ಕಾರಣರಾದ ಅಧಿಕಾರಿಗಳನ್ನು 48 ಗಂಟೆಯೊಳಗೆ ಅಮಾನತು ಮಾಡಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.