ಕಾರವಾರ (ಉತ್ತರ ಕನ್ನಡ): ನೆರೆಯಿಂದ ಸೇತುವೆ ಕೊಚ್ಚಿಹೋಗಿ ಮೂರು ವರ್ಷಗಳೇ ಕಳೆದಿವೆ. ಸ್ಥಳಕ್ಕೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಭೇಟಿ ನೀಡಿ ತೆರಳಿದ್ದರೂ ಇದುವರೆಗೂ ಸೇತುವೆ ಮರು ನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಗ್ರಾಮಸ್ಥರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಸೇತುವೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಿತ್ಯ ಓಡಾಟ ನಡೆಸುವಂತಾಗಿದೆ.
ನೂತನ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ದುಃಸ್ಥಿತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಗ್ಗಾರು, ಕಲ್ಲೇಶ್ವರ ಹಾಗೂ ಹಳವಳ್ಳಿ ಗ್ರಾಮಸ್ಥರದ್ದಾಗಿದೆ. ಯಲ್ಲಾಪುರ ತಾಲೂಕಿನ ಗುಳ್ಳಾಪುರದಿಂದ ಹೆಗ್ಗಾರು ಗ್ರಾಮಕ್ಕೆ ಸಂಪರ್ಕಿಸಲು ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕಳೆದ 2020ರಲ್ಲಿ ಸಂಭವಿಸಿದ್ದ ನೆರೆಯಲ್ಲಿ ಕೊಚ್ಚಿಹೋಗಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀಘ್ರ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಮೂರು ವರ್ಷ ಕಳೆದರೂ ಕೂಡ ಸೇತುವೆ ನಿರ್ಮಾಣವಾಗಿಲ್ಲ. ಸದ್ಯ ತಾತ್ಕಾಲಿಕ ಸೇತುವೆಯಲ್ಲಿ ಜನರು ಓಡಾಟ ನಡೆಸುತ್ತಿದ್ದಾರೆ. ಅದೂ ಸಹ ಮಳೆ ಹೆಚ್ಚಾದ ಸಂದರ್ಭದಲ್ಲಿ ನೀರಲ್ಲಿ ಮುಳುಗುವುದರಿಂದ ಓಡಾಟಕ್ಕೆ ಅಪಾಯಕಾರಿಯಾಗಿದೆ. ಆದಷ್ಟು ಶೀಘ್ರದಲ್ಲಿ ಶಾಶ್ವತ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಆಸ್ಪತ್ರೆಗಳಿಗೆ ತೆರಳಲೂ ಪರದಾಟ: ''ನಮ್ಮಲ್ಲಿ ಸ್ಥಳೀಯವಾಗಿ ಸಹಕಾರಿ ಸಂಘಗಳ ಮೂಲಕ ರೇಷನ್ ವಿತರಣೆ ಮಾಡಬಹುದಾದರೂ ದೋಣಿ ಮೂಲಕ ರೇಷನ್ ಸಾಗಾಟ ಮಾಡಬಹುದು. ಆದರೆ ಈಗ ಇದೂ ಸಾಧ್ಯವಾಗದಂತಾಗಿದೆ. ಆಸ್ಪತ್ರೆಗಳಿಗೂ ತೆರಳುವ ಪರಿಸ್ಥಿತಿ ಇಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು ಹಾಗೂ ಸಚಿವರಿಗೆ ಮನವಿ ಮಾಡಿದ್ದೇವೆ. ಆದ್ದರಿಂದ ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು'' ಎಂದು ಹೆಗ್ಗಾರ್ ಗ್ರಾಮದ ಜಯಪ್ರಕಾಶ್ ಗಾಂವಕರ್ ಮನವಿ ಮಾಡಿದ್ದಾರೆ.
ಸೇತುವೆ ಪ್ರದೇಶವು ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ ಅವರ ಕ್ಷೇತ್ರವಾಗಿದ್ದು, ಅವರ ಸ್ವಗ್ರಾಮವೂ ಸಹ ಇದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸೇತುವೆ ಮರು ನಿರ್ಮಿಸಿಕೊಡುವ ಭರವಸೆ ನೀಡಿದ್ದರಾದರೂ ಇದುವರೆಗೂ ಭರವಸೆಯಾಗಿಯೇ ಉಳಿದಿದೆ. ಗಂಗಾವಳಿ ನದಿಯ ಇನ್ನೊಂದು ಅಂಚಿನಲ್ಲಿರುವ ಸುಮಾರು ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದ್ದ ಈ ಸೇತುವೆ ಮುರಿದುಬಿದ್ದ ಕಾರಣ ಈ ಭಾಗದ ಗ್ರಾಮಗಳ ಜನರು, ವಿದ್ಯಾರ್ಥಿಗಳು ನಿತ್ಯ ಓಡಾಡಲು ಪರದಾಡುವಂತಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಹರಸಾಹಸವೇ ಆಗಿದ್ದು, ಜೀವ ಕೈಯಲ್ಲಿ ಹಿಡಿದು ನದಿಯ ಮಾರ್ಗದಲ್ಲಿ ಓಡಾಟ ನಡೆಸಬೇಕಿದೆ. ಹೀಗಾಗಿ ಈ ಭಾಗದ ಗ್ರಾಮಗಳಿಗೆ ಸೇತುವೆ ತೀರಾ ಅಗತ್ಯವಿದ್ದು ಸರ್ಕಾರ ಒಂದು ವರ್ಷದೊಳಗೆ ನೂತನ ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಜಮೀನಿಗೆ ಅಳವಡಿಸಿದ ಐಬೆಕ್ಸ್ ತಂತಿ ವಶಕ್ಕೆ ಪಡೆದ ಆರೋಪ: ಬುಡಕಟ್ಟು ಅರಣ್ಯವಾಸಿಗಳ ಗೋಳು