ಕಾರವಾರ (ಉತ್ತರ ಕನ್ನಡ): ಪುರಾಣ ಪ್ರಸಿದ್ದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಇದೀಗ ಆದಾಯ ತೆರಿಗೆ ಬಿಸಿ ತಟ್ಟಿದೆ. ದೇವಸ್ಥಾನದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಸುಮಾರು 1.38 ಕೋಟಿ ರೂಪಾಯಿ ತೆರಿಗೆ ಭರಿಸುವಂತೆ ದೇವಸ್ಥಾನ ಆಡಳಿತ ಮಂಡಳಿಗೆ ನೊಟೀಸ್ ನೀಡಲಾಗಿದೆ.
ಗೋಕರ್ಣ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪ್ರದೇಶ. ಶಿವನ ಆತ್ಮ ಲಿಂಗವಿರುವ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನಿತ್ಯ ದೇಶ ವಿದೇಶದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ದೇವಸ್ಥಾನದ ಆಡಳಿತದ ಕುರಿತ ವಿವಾದ ಸುಪ್ರೀಂ ಕೋರ್ಟ್ವರೆಗೆ ಹೋಗಿದೆ. ಸದ್ಯ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಡಿ ಆಡಳಿತ ಮಂಡಳಿ ಇದೆ.
1.38 ಕೋಟಿ ರೂ. ಆದಾಯ ತೆರಿಗೆ ಬಾಕಿ: ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ದೇವಸ್ಥಾನದಿಂದ ಸುಮಾರು 1.38 ಕೋಟಿ ಆದಾಯ ತೆರಿಗೆ ಹಣವನ್ನು ಕಟ್ಟುವಂತೆ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ವರ್ಚುಯಲ್ ಸಭೆ (ಗೂಗಲ್ ಮೀಟ್) ನಡೆಸಿದ್ದಾರೆ. ಈ ಸಭೆಯಲ್ಲಿ 2008ರಿಂದ ಪ್ರಸ್ತುತ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕ ಪರಿಶೋಧಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಅವರು ನೀಡಿದ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ್ದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ವಿಚಾರದಲ್ಲಿ ಶ್ರೀರಾಮಚಂದ್ರಾಪುರ ಮಠ ತಮಗೆ ಸೇರಬೇಕೆಂದು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಮುಜರಾಯಿ ಇಲಾಖೆಯಿಂದ ಬಿಡುಗಡೆಗೊಳಿಸಿ ಮಠಕ್ಕೆ ವಹಿಸಿತ್ತು.
ಅಂದಿನಿಂದ ನ್ಯಾಯಾಲಯದಲ್ಲಿ ಮಠದ ವಿರೋಧಿ ಬಣಗಳ ಪ್ರಕರಣ, ವಾದ- ಪ್ರತಿವಾದ ಇತ್ಯಾದಿಗಳು ನಡೆದು ಕೊನೆಗೆ 2018ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ದೇವಸ್ಥಾನದ ನಿರ್ವಹಣೆಯನ್ನು ಸರಕಾರದಿಂದ ನೇಮಕ ಮಾಡಲಾದ ಸಮಿತಿಗೆ ವಹಿಸುವಂತೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಲಾಗಿತ್ತು.
ಇನ್ನು ದೇವಸ್ಥಾನದ ಆಡಳಿತವನ್ನು 2015-16ನೇ ಸಾಲಿನಲ್ಲಿ ರಾಮಚಂದ್ರಾಪುರ ಮಠ ನಡೆಸುತ್ತಿತ್ತು. ಆ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬಂದ ಕಾರಣ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆಯು ತೆರಿಗೆ ಹಣ ಕಟ್ಟುವಂತೆ ಸೂಚನೆ ನೀಡಿದೆ. ಇದರಿಂದ ಅಂದಿನ ಆಡಳಿತ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಕೂಡ ಎನ್ನಲಾಗಿದೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ: ತೆರಿಗೆ ಹಣ ಕಟ್ಟುವವರೆಗೆ ಆದಾಯ ತೆರಿಗೆ ಇಲಾಖೆಗೆ ದಂಡದ ಮೊತ್ತದ ಶೇ.20 ರಷ್ಟು ಪಾವತಿಸುವಂತೆ ಸೂಚಿಸಿತ್ತು. ಸದ್ಯ ಈ ಹಣವನ್ನು ಪಾವತಿ ಮಾಡುವ ಸಂಬಂಧ ದೇವಸ್ಥಾನದ ಮೇಲ್ವಿಚಾರಣ ಸಮಿತಿ ಸದಸ್ಯರು ಸಭೆ ನಡೆಸಿದ್ದು, ಶೀಘ್ರದಲ್ಲೇ ತೆರಿಗೆ ಹಣವನ್ನು ಕಟ್ಟುತ್ತೇವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Zero shadow day: ಆ.18ರಂದು ಬೆಂಗಳೂರಿನಲ್ಲಿ 'ಶೂನ್ಯ ನೆರಳು' ಗೋಚರ