ಭಟ್ಕಳ(ಉ.ಕ): ಪಟ್ಟಣ ವ್ಯಾಪ್ತಿಯ ಹೆಬಳೆಯ ಜಾಮಿಯಾಬಾದ್ ರಸ್ತೆಯ ಮೇಲೆ ಜನರು ಕಸ ಎಸೆದು ಹೋಗುತ್ತಿದ್ದು, ಕೊರೊನಾ ಪ್ರಕರಣವಿರುವ ಹಾಟ್ ಸ್ಪಾಟ್ ಪ್ರದೇಶದಲ್ಲಿ ಈಗ ಕೊರೊನಾ ಜೊತೆಗೆ ಬೇರೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಸದ್ಯ ಭಟ್ಕಳದಲ್ಲಿ ಸತತ 4 ದಿನದಲ್ಲಿ ಹಲವು ಕೊರೊನಾ ಪ್ರಕರಣ ಕಂಡು ಬಂದಿದ್ದು, 28 ಪಾಸಿಟಿವ್ ಪ್ರಕರಣದಿಂದಾಗಿ ಪ್ರಕರಣ ಕಂಡು ಬಂದ ಪ್ರದೇಶದಲ್ಲಿ ಜನರ ಓಡಾಟ ಬಂದ್ ಮಾಡಲಾಗಿದೆ. ಆದರೆ ಮನೆಯಲ್ಲಿನ ಒಣ ಕಸ, ಹಸಿ ಕಸ ಹಾಗೂ ತ್ಯಾಜ್ಯವನ್ನು ರಾತ್ರಿ ವೇಳೆ ರಸ್ತೆಯ ಪಕ್ಕದಲ್ಲಿ ಬಂದು ಜನ ಎಸೆಯುತ್ತಿದ್ದಾರೆ.
ಭಟ್ಕಳ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ರಸ್ತೆಗಿಳಿಯದೇ ಮನೆಯಲ್ಲಿಯೇ ಜನರಿದ್ದಾರೆ. ಕೊರೊನಾ ವೈರಸ್‍ಗೆ ಕಡಿವಾಣ ಹಾಕಬೇಕೆಂಬ ಸೂಚನೆ ಪಾಲನೆಯ ನಡುವೆ ಮನೆಯಲ್ಲಿನ ಕಸ ಎಲ್ಲಿ ಎಸೆಯಬೇಕೆಂಬ ಗೊಂದಲದಲ್ಲಿ ಜನರು ರಸ್ತೆಗೆ ಎಸೆಯುತ್ತಿರುವುದು ಕಂಡು ಬಂದಿದೆ. ಕೊರೊನಾ ತಡೆಗೆ ಜನರ ಓಡಾಟಕ್ಕೆ ಕಡಿವಾಣ ಹಾಕಿದರೆ ಜನರು ಎಸೆಯುವ ಕಸಕ್ಕೆ ಮುಕ್ತಿ ನೀಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯ ಅಕ್ಕಪಕ್ಕ ಜನ ರಾಶಿ ರಾಶಿ ಕಸವನ್ನು ರಸ್ತೆಯ ತುಂಬೆಲ್ಲಾ ಬಿಸಾಡಿದ್ದಾರೆ. ಈಗಾಗಲೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆಯನ್ನು ಬಂದ್ ಮಾಡಿದ್ದು, ಕೆಲವೊಂದು ಕಡೆ ಮರದ ತುಂಡು, ತಗಡಿನ ಶೀಟ್ ಹಾಗೂ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಹಾಕಿ ಸಂಚಾರ ಬಂದ್ ಮಾಡಲಾಗಿದೆ.
ಕಸದ ವಾಹನ ಮನೆಗೆ ಬರುತ್ತಿಲ್ಲ:
ಇಲ್ಲಿನ ಎಲ್ಲಾ ಗಲ್ಲಿ ಗಲ್ಲಿಯ ರಸ್ತೆ ಸಂಚಾರ ಬಂದ್ ಮಾಡಿದ ಹಿನ್ನೆಲೆ ಕಸದ ವಾಹನ ಮನೆ ಮನೆಗೆ ಹೋಗಲು ಸಾಧ್ಯವಿಲ್ಲವಾಗಿದೆ. ಇದರಿಂದ ಇಲ್ಲಿನ ನಿವಾಸಿಗರು ಕಸವನ್ನು ರಸ್ತೆಯ ಪಕ್ಕದ ಗುಂಡಿಯಲ್ಲಿ ಎಸೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ರಸ್ತೆ ಬಂದ್ ಮಾಡಿದ ಕಾರಣ ಮನೆ ಮನೆ ಕಸ ವಿಲೇವಾರಿಗೆ ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ.
ಸೀಲ್ ಡೌನ್ ಆದ ಪ್ರದೇಶಗಳಲ್ಲಿನ ಮನೆಗಳ ಕಸ ವಿಲೇವಾರಿಗೆ ತಾಲೂಕಾಡಳಿತ ಸಂಬಂಧಪಟ್ಟ ಆಯಾ ಪಂಚಾಯತ್, ಪಟ್ಟಣ ಪಂಚಾಯತ್ಗೆ ಸೂಚನೆ ನೀಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.