ಭಟ್ಕಳ: ಕಳೆದ ಮೂರು-ನಾಲ್ಕು ತಿಂಗಳಿನಿಂದ ಕೊರೊನಾ ಅಬ್ಬರದ ನಡುವೆಯೂ ಗಣಪತಿ ಮೂರ್ತಿ ತಯಾರಕರು ಸದ್ದಿಲ್ಲದೇ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದರು. ಈಗ ಅವೆಲ್ಲಾ ಅಂತಿಮ ಹಂತಕ್ಕೆ ಬಂದಿದ್ದು, ವಿಘ್ನವಿನಾಶಕನನ್ನು ಪ್ರತಿಷ್ಠಾಪಿಸಿ, ಪೂಜಿಸಲು ಸಿದ್ಧವಾಗಿವೆ.
ತಾಲೂಕಿನಲ್ಲಿ ಸಾಕಷ್ಟು ಕಲಾವಿದರು ತಲೆತಲಾಂತರದಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಈ ಪೈಕಿ ಭಟ್ಕಳದ ಗುಡಿಗಾರಗಲ್ಲಿಯ ಅರುಣ ಗುಡಿಗಾರ ಕುಟುಂಬ ನಾಲ್ಕು ತಲೆಮಾರುಗಳಿಂದ ಮೂರ್ತಿ ತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಸದ್ಯ ಹೂವಿನ ಪೇಟೆಯಲ್ಲಿರುವ ಅರುಣ ಗುಡಿಗಾರ, ಅವರ ಮಕ್ಕಳು ಇಂದಿಗೂ ಮೂರ್ತಿ ತಯಾರಿಕೆಯಲ್ಲಿ ಸಿದ್ಧಹಸ್ತರು. ಒಟ್ಟು 200ಕ್ಕೂ ಅಧಿಕ ಗಣಪತಿ ಮೂರ್ತಿಗಳನ್ನು ತಯಾರಿಸುವ ಇವರು, 15ಕ್ಕೂ ಅಧಿಕ ಸಾರ್ವಜನಿಕವಾಗಿ ಪೂಜಿಸಲ್ಪಡುವ ಮೂರ್ತಿಗಳನ್ನು ತಯಾರಿಸುತ್ತಾರೆ.
ಪ್ರತಿ ಬಾರಿಯಂತೆ ಮಣ್ಣಿನ ಕೊರತೆ:
ಕೊರೊನಾ ಶುರುವಾಗುವುದಕ್ಕೂ ಮುನ್ನವೇ ಮೂರ್ತಿ ತಯಾರಿಕೆ ಕೆಲಸ ಆರಂಭಿಸಿದ್ದು, ಕಳೆದ ಬಾರಿಯಂತೆ ಮಣ್ಣಿನ ತೊಂದರೆ ಎದುರಾಗಿದೆ. ಭಟ್ಕಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಕಂಡು ಬಂದ ಕಾರಣ ಜನರು ಮಣ್ಣು ತಂದು ಕೊಡಲು ನಿರಾಕರಿಸುತ್ತಿದ್ದರು. ಇದರ ಮಧ್ಯೆಯೇ ಕಷ್ಟಪಟ್ಟು ಮಣ್ಣಿನ ಕೊರತೆ ನೀಗಿಸಲಾಯಿತು. ಮಣ್ಣು ಹದ ಮಾಡುವುದರಿಂದ ಹಿಡಿದು ಗಣಪತಿ ಮೂರ್ತಿಗೆ ಬಣ್ಣ ಹಚ್ಚುವ ತನಕ ಕಾರ್ಮಿಕರ ಸಂಬಳವೂ ತುಟ್ಟಿಯಾಗಿದೆ. ಸಾಕಷ್ಟು ಸಮಸ್ಯೆಗಳ ನಡ್ವೆ ಪರಂಪರೆಯ ಆಚರಣೆ ಮಾಡಲೇಬೇಕು ಎಂದು ಅರುಣ ಗುಡಿಗಾರ ಹೇಳುತ್ತಾರೆ.